– ನೋವಿನ ಮಧ್ಯೆಯೂ ಈಜಿ ಗೆದ್ದ ನಿರಂಜನ
– ದಿ ರೀನಾ ಡಿಸೋಜ ಶೋದಲ್ಲಿ ಸಾಧಕನ ಮಾತು
ಸಾಧನೆಗೆ ಛಲವೇ ಬಲ. ದೃಢ ಮನಸ್ಸಿದ್ದವನಿಗೆ ಕಲ್ಲು ಮುಳ್ಳಿನ ಹಾದಿಯೂ ಸುಗಮವಾಗಿರುತ್ತದೆ. ನೋವು ನಲಿವುಗಳ ಮಧ್ಯೆ ಮಿಂದೆದ್ದ ಈ ಯುವಕನ ಕಥೆಯೇ ಸ್ಪೂರ್ತಿದಾಯಕ. ಆ ಯುವಕ ಇನ್ಯಾರು ಅಲ್ಲ. ಅಂತರಾಷ್ಟ್ರೀಯ ಪ್ಯಾರಾ ಈಜು ಪಟು , ಹತ್ತು ಹಲವು ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿರುವ ಹೆಮ್ಮೆಯ ಈಜುಗಾರ ನಿರಂಜನ್ ಮುಕುಂದನ್ ಅವರು. 16 ಬಾರಿ ಸರ್ಜರಿಗೊಳಗಾಗಿದ್ದರೂ ಅವರ ಸಾಧನೆ ಅಂತಿಂಥದ್ದಲ್ಲ. ನೋವು -ಕಷ್ಟಗಳನ್ನೆಲ್ಲಾ ಬದಿಗೊತ್ತಿ ಮುನ್ನುಗ್ಗಿದ ಅನುಭವವನ್ನು ಸ್ವತಃ ನಿರಂಜನ್ ಅವರೇ ಹೇಳಿ ಕೊಂಡಿದ್ದಾರೆ. ವೆಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮ ದಿ ರೀನಾ ಡಿಸೋಜಾ ಶೋ -ಎಪಿಸೋಡ್ 5 ದಲ್ಲಿ ನಿರಂಜನ್ ಅವರು ಮನ ಬಿಚ್ಚಿ ಮಾತನಾಡಿದ್ದಾರೆ. ಕ್ರೀಡಾ ನಿರೂಪಕಿ ರೀನಾ ಡಿಸೋಜ ಅವರ ಎಲ್ಲಾ ಪ್ರಶ್ನೆಗಳಿಗೆ ಮುಚ್ಚು ಮರೆಯಿಲ್ಲದೇ ಉತ್ತರಿಸಿದ್ದಾರೆ.
ಜೀವನದ ದಿಕ್ಕನ್ನೇ ಬದಲಿಸಿತು
ನಿರಂಜನ್ ಹುಟ್ಟುತ್ತಲೇ ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಕಾಲಿನಲ್ಲಿ ಶಕ್ತಿ ಕುಂಠಿತವಾಗಿತ್ತು, ನಡೆಯುವುದಕ್ಕೂ ಆಗುತ್ತಿರಲಿಲ್ಲ. ಹೀಗಿದ್ದರೂ ನಿರಂಜನ್ ತಂದೆ -ತಾಯಿ ಯಾವತ್ತೂ ನಿರಂಜನ್ ಅವರನ್ನು ದೂರ ಮಾಡಿದವರಲ್ಲ. ಎಲ್ಲರಂತೆಯೇ ಅವರು ಎಂದು ಭಾವಿಸುತ್ತಿದ್ದರು. ಅಕ್ಕ -ಪಕ್ಕದವರು ನಿರಂಜನ್ ಬಗ್ಗೆ ಏನೇ ಹೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಕಾಲಿನ ಸಮಸ್ಯೆಗೆ ಪರಿಹಾರ ಕಂಡು ಹುಡುಕಲು ಚಿಕಿತ್ಸೆಗಾಗಿ ವೈದ್ಯರ ಮೊರೆ ಹೋದರು. ಚಿಕಿತ್ಸೆ ನೀಡಿದ್ದ ವೈದ್ಯರು ಕಾಲಿಗೆ ಶಕ್ತಿ ಬರಲು ಕುದುರೆ ಓಡಿಸುವಂತೆ ಅಥವಾ ಸ್ವಿಮ್ಮಿಂಗ್ ಮಾಡುವಂತೆ ಸಲಹೆ ನೀಡಿದರು. ಅದರ ಅನುಸಾರ ತಂದೆ – ತಾಯಿ ಪ್ರೋತ್ಸಾಹದೊಂದಿಗೆ ಜಯನಗರ ಸ್ವಿಮ್ಮಿಂಗ್ ಫೂಲ್ ಗೆ ಸೇರಿಕೊಂಡರು. ಆಗ ಅವರಿಗೆ 8 ವರ್ಷ ವಯಸ್ಸಾಗಿತ್ತು. ಹೀಗೆ ಬದುಕುವುದಕ್ಕಾಗಿ ಕಲಿತ ಈಜು ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು.
16 ಬಾರಿ ಶಸ್ತ್ರ ಚಿಕಿತ್ಸೆ
ಬೆಂಗಳೂರಿನ ಜೆ.ಪಿ ನಗರದ ಮುಕುಂದನ್ ಹಾಗೂ ಲಕ್ಷ್ಮೀ ದಂಪತಿಗಳ ಮಗ ನಿರಂಜನ್ ಹುಟ್ಟು ವಿಶಿಷ್ಟ ಚೇತನ. ಜನಿಸಿದ 8 ತಿಂಗಳಲ್ಲೇ ಆಪರೇಷನ್ ಗೆ ಒಳಗಾದ ನತದೃಷ್ಟ. ಬೆನ್ನಿಗೆ ಸಂಬಂಧ ಪಟ್ಟ ಸ್ಪೀನಾಬಿಫಿಡಾ ತೊಂದರೆಯಿಂದ ಆಪರೇಶನ್ ಗೆ ಗುರಿಯಾದರು. ಅವರಿಗೆ 1 ವರ್ಷ ಪೂರ್ಣಗೊಳ್ಳುತ್ತಲೇ ಮತ್ತೊಂದು ಆಪರೇಷನ್, 3 ವರ್ಷದವರಾದ ಮೇಲೆ ಇನ್ನೊಂದು ಆಪರೇಷನ್,4 ವರ್ಷ ತುಂಬುತ್ತಿರುವಾಗ ಮತ್ತೊಂದು ಆಪರೇಷನ್ ಹೀಗೆ ಬೆನ್ನಿನಲ್ಲಿ ಒಂದು ಪ್ರಮುಖ ಶಸ್ತ್ರ ಚಿಕಿತ್ಸೆ ಹಾಗೂ ಕಾಲಿನಲ್ಲಿ 10-11 ಪ್ರಮುಖ ಶಸ್ತ್ರ ಚಿಕಿತ್ಸೆ ಸೇರಿದಂತೆ ಒಟ್ಟು 16 ಆಪರೇಷನ್ ಗೆ ಒಳಗಾಗಿರುವ ನಿರಂಜನ್ ಕಾಲು ಸ್ವಾಧೀನ ಕಳೆದು ಕೊಂಡಿತು. 2004ರಲ್ಲಿ 16 ಗಂಟೆಯ ಕಾಲಿನ ಮ್ಯಾರಥಾನ್ ಸರ್ಜರಿಗೆ ಒಳಗಾಗಿದ್ದ ನಿರಂಜನ್ ಗೆ ಪದ್ಮನಾಭ ನಗರ ಮಹಾರಾಜ ಆಗರ್ ಸೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಆತ್ಮವಿಶ್ವಾಸ ಹೆಚ್ಚಿಸಿದ ಈಜುಕೊಳ
ವೈದ್ಯರು ಇವರ ಕಾಲು ಪರೀಕ್ಷಿಸಿ ಭವಿಷ್ಯದಲ್ಲಿ ಕುದುರೆ ಸವಾರಿ ಅಥವಾ ಈಜಿನಲ್ಲಿ ತೊಡಗಿಕೊಂಡರೆ ನಡೆದಾಡಲು ಸಾಧ್ಯವಾಗ ಬಹುದು ಎಂದು ಹೇಳಿದ್ದರು. ಕುದುರೆ ಸವಾರಿ ಮಾಡಲು ಇಷ್ಟವಿರದೇ ನಿರಂಜನ್ ಜಿಗಿದಿದ್ದು ಈಜುಕೊಳಕ್ಕೆ . 2003ರಲ್ಲಿ ಇವರ ಅಭ್ಯಾಸ ನಿಧಾನವಾಗಿ ಶುರುವಾಯಿತು. ಅತ್ಯಂತ ಕಡಿಮೆ ಅವಧಿಯಲ್ಲೇ ಈಜು ಕಲಿತು ಕೊಂಡರು. ಇದನ್ನು ಗಮನಿಸಿದ ಜಯನಗರದ ಸ್ವಿಮ್ಮಿಂಗ್ ಕೋಚ್ ಜಾನ್ ಕ್ರಿಸ್ಟಫರ್ ನಿನಗೆ ಒಳ್ಳೆಯ ಭವಿಷ್ಯವಿದೆ. ಪ್ಯಾರಾ ಈಜು ಚಾಂಪಿಯನ್ ಶಿಪ್ ನ ಈಜು ವಿಭಾಗಳಲ್ಲಿ ಸ್ಪರ್ಧಿಸಬಹುದು ಎಂದು ಕಿವಿ ಮಾತು ಹೇಳಿದರು.
ಪ್ರಯತ್ನಕ್ಕೆ ಫಲ ಸಿಕ್ಕಿತು
ಈಜುವನ್ನೇ ಗಂಭೀರವಾಗಿ ತೆಗೆದುಕೊಂಡು ಬೆಳಿಗ್ಗೆ -ಸಂಜೆ ನಿರಂತರ ಅಭ್ಯಾಸ ಮುಂದುವರಿಸಿದರು. ಪ್ರಯತ್ನದ ಫಲವೇನೋ ಎನ್ನುವಂತೆ 2004ರಲ್ಲಿ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ದಾಖಲೆಯೊಂದಿಗೆ 50 ಮೀ. ಬಟರ್ ಫ್ಲೈ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದುಕೊಂಡರು. ಇದು ಇವರ ಜೀವನದ ಮೊದಲ ಪದಕವೂ ಹೌದು. ಅದೇ ವರ್ಷ ಕೋಲ್ಕಾತಾದಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಈಜು ಚಾಂಪೀಯನ್ ಶಿಪ್ ನ ಬಟರ್ ಫ್ಲೈ ವಿಭಾಗದಲ್ಲಿ ಬಟರ್ ಫ್ಲೈ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಚೊಚ್ಚಲ ಅಂತರಾಷ್ಟ್ರೀಯ ಆಯ್ಕೆ
2010ರಲ್ಲಿ ಚೊಚ್ಚಲ ಅಂತರಾಷ್ಟ್ರೀಯ ಈಜು ಚಾಂಪಿಯನ್ ಶಿಪ್ ಗಾಗಿ ಜರ್ಮನಿಗೆ ತೆರಳಿದರು. ಅಗ್ರ 10ರೊಳಗೆ ಸ್ಥಾನ ಪಡೆದುಕೊಂಡು ಆತ್ಮ ವಿಶ್ವಾಸ ಹೆಚ್ಚಿಸಿ ಕೊಂಡರು. 2011ರಲ್ಲಿ ಯುರೋಪಿಯನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ 200 ಮೀ.ಫ್ರೀಸ್ಟೈಲ್ ವಿಭಾಗದಲ್ಲಿ ದೇಶಕ್ಕೆ ಕಂಚಿನ ಪದಕ ತಂದು ಕೊಟ್ಟರು. 2012ರಲ್ಲಿ ಬ್ರಿಟೀಷ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಗ್ರ 8ರೊಳಗೆ ಸ್ಥಾನ ಪಡೆದು ದೇಶಕ್ಕೆ ಹಿಂದಿರುಗಿದ್ದರು. ಅಮೇರಿಕದಲ್ಲಿ ನಡೆದ ಐವಾಸ್ ವಿಶ್ವ ಜೂನಿಯರ್ ಗೇಮ್ಸ್ ಈಜು ಸ್ಪರ್ಧೆಯಲ್ಲಿ 100 ಮೀ. ಬಟರ್ ಫ್ಲೈ ಹಾಗೂ 100 ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಹಾಗೂ 100 ಮೀ ಬ್ಯಾಕ್ ಸ್ಟ್ರೋಕ್ ಕಂಚಿನ ಪದಕ ಪಡೆದು ಕೊಂಡರು.
ಹತ್ತು ಪದಕ ಜಯಿಸಿ ದಾಖಲೆ
ಅದು 2015ನೇ ಇಸವಿ. ಮುಕುಂದನ್ ಪಾಲಿಗೆ ಅದೃಷ್ಟದ ವರ್ಷವೂ ಹೌದು. ಐವಾಸ್ ವಿಶ್ವ ಜೂನಿಯರ್ ಗೇಮ್ಸ್ ನಲ್ಲಿ ಹತ್ತು ಪದಕ ಜಯಿಸಿ ದಾಖಲೆ ನಿರ್ಮಿಸಿದರು. 2015ರ ಜುಲೈನಲ್ಲಿ ನಡೆದಿದ್ದ ನೆದರ್ಲೆಂಡ್ಸ್ ನ ಸ್ಟಾಡ್ಸ್ ಕನಾಲ್ ನಲ್ಲಿ ಜರುಗಿದ್ದ ಕೂಟದಲ್ಲಿ ಏಳು ಸ್ವರ್ಣ ಪದಕ ಮತ್ತು ಮೂರು ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಅಂತರಾಷ್ಟ್ರೀಯ ಪ್ಯಾರಾ ಈಜು ಪಟು ಕರ್ನಾಟಕದ ನಿರಂಜನ್ ಅವರ ಈ ದಾಖಲೆಯು ಲಿಮ್ಕಾ ದಾಖಲೆಗೂ ಸೇರ್ಪಡೆಯಾಗಿದ್ದು ಎಲ್ಲರೂ ಹೆಮ್ಮೆ ಪಡುವಂತಹ ವಿಚಾರವೂ ಹೌದು.
ಏಷ್ಯನ್ ದಾಖಲೆ ಮುರಿದ ನಿರಂಜನ್
2018ರ ಜರ್ಮನ್ನಿನ ಬರ್ಲಿನ್ ನಲ್ಲಿ ನಡೆದಿದ್ದ ವಿಶ್ವ ಈಜು ಸರಣಿಯಲ್ಲಿ ನಿರಂಜನ್ ಅವರು 200 ಮೀ.ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ನೂತನ ಏಷ್ಯನ್ ದಾಖಲೆ ಬರೆದಿದ್ದರು. 3 ನಿಮಿಷ 16.01 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ನಿರಂಜನ್ 15 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದರು.
ಸೆಗ್ ಮೆಂಟ್ಸ್
ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಗೇಮಿಂಗ್ ಸೆಗ್ ಮೆಂಟ್ ನಲ್ಲಿ ನಿರಂಜನ್ ಮುಕುಂದನ್ ಅವರು ಸಂತೋಷದಿಂದ ಪಾಲ್ಗೊಂಡು ಆಟ ಆಡಿದರು. ಮೊದಲ ಗೇಮ್ ನಲ್ಲಿ ಐದು ಅವಕಾಶಗಳನ್ನು ಪಡೆದು ಕೊಂಡರೂ ಸೋಲುಂಡರು. ಈ ತಪ್ಪಿಗೆ ಜ್ಯೂಸ್ ಕುಡಿಯುವ ಮೂಲಕ ಸಣ್ಣ ಶಿಕ್ಷೆಯನ್ನು ಅನುಭವಿಸಬೇಕಾಯಿತು. ಕಾರ್ಯಕ್ರಮದಲ್ಲಿ ಫಲಕ,ಬ್ಯಾಟ್ ಗಳಿಗೆ ಹಸ್ತಾಕ್ಷರ ನೀಡಿದರು. ಎಜುಕೇಟಿವ್ ಸೆಗ್ ಮೆಂಟ್ ನಲ್ಲಿ ನಿರಂಜನ್ ಅವರು ಯುವ ಈಜುಗಾರರಿಗೆ ಈಜು ಕುರಿತಂತೆ ಸಲಹೆ ನೀಡಿದರು. `ಮೊದಲು ನಿಮ್ಮ ಸಾಮರ್ಥ್ಯದ ಬಗ್ಗೆ ನೀವು ತಿಳಿದು ಕೊಳ್ಳಿ. ನಿಮ್ಮ ಕಷ್ಟ-ನೋವುಗಳನ್ನು ಪಕ್ಕಕ್ಕಿಡಿ. ಇತರರ ಟೀಕೆ ಮಾತುಗಳಿಗೆ ಆಹಾರವಾಗಬೇಡಿ. ನಿಮ್ಮ ಗುರಿಯ ಕಡೆ ಗಮನವಿಡಿ’ ಎಂದರು. ಸ್ವಿಮ್ಮಿಂಗ್ ಕೇವಲ ಸ್ಪರ್ಧೆಗಾಗಿ ಅಲ್ಲ,ಅದರಿಂದ ಒತ್ತಡ ದೂರವಾಗುತ್ತದೆ. ನೆಮ್ಮದಿ ಸಿಗುತ್ತದೆ. ಸಾಕಷ್ಟು ಮಂದಿ ವ್ಯಾಯಾಮಕ್ಕಾಗಿ ಸ್ವಿಮ್ಮಿಂಗ್ ಮಾಡುತ್ತಾರೆ ಎಂದು ಹೇಳಿದರು. ಫೂಡ್ ಟೇಸ್ಟಿಂಗ್ ಸೆಗ್ ಮೆಂಟ್ ನಲ್ಲಿ ನಿರಂಜನ್ ಮುಕುಂದನ್ ಅವರು ಖಾದ್ಯಗಳ ಸವಿಯನ್ನು ಸವಿದರು. ರಾಪಿಡ್ ಫಾಯರ್ ನಲ್ಲಿ ಕೇಳಲಾಗಿದ್ದ ಎಲ್ಲಾ ಪ್ರಶ್ನೆಗಳಿಗೆ ನಿರಂಜನ್ ಅವರು ನೇರ ಉತ್ತರ ನೀಡಿದರು. ಈ ಮಧ್ಯೆ ಕನ್ನಡ ಜನತೆಗೆ ನಮಸ್ಕಾರ ಹೇಳುತ್ತಾ ,ನಾನು ನಿಮ್ಮ ಹುಡುಗ ,ನಿಮ್ಮ ಆಶೀರ್ವಾದ,ಬೆಂಬಲ ಹೀಗೆ ಇರಲಿ ಎಂದರು. ಕಾರ್ಯಕ್ರಮದ ಕೊನೆ ಹಂತದಲ್ಲಿ ಲೀವ್ ಆಕ್ಟೀವ್ ಅವರ ಕಡೆಯಿಂದ ಗಿಫ್ಟ್ ಹ್ಯಾಂಪರ್ ನೀಡಲಾಯಿತು.
-ದಯಾಮಣಿ ಹೇಮಂತ್