ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು
ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು
January 29, 2019
ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ
ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ
February 2, 2019
ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು
ಮಾಯಾಂಕ್ ಎಂಬ ಬ್ಯಾಟಿಂಗ್ ಮುತ್ತು
January 29, 2019
ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ
ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ
February 2, 2019

ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್

ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್

Image from post regarding ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್

ನಂಬಿಕೆ ಮತ್ತು ಶ್ರದ್ದೆಯಿಂದ ಪ್ರಯತ್ನಿಸಿದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಖಚಿತ. ಗೆಲುವಿನ ಬೆನ್ನಟ್ಟಿ ಹೊರಟವನಿಗೆ ನಿರಂತರ ಪರಿಶ್ರಮ ಬೇಕು. ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದೆನ್ನುವ ಕನಸುಗಳಿರಬೇಕು. ಹೌದು, ಇಂತವರ ಸಾಲಿನಲ್ಲಿ ಕ್ರಿಕೆಟರ್ ದೇವದತ್ತ ಪಡಿಕಲ್ ಅವರ ಹೆಸರು ರಾರಾಜಿಸುತ್ತಿದೆ.

ವಯಸ್ಸು 18. ಕೇರಳ ಮೂಲದವರಾದರೂ ಆಟ-ಪಾಠವೆಲ್ಲ ಕರ್ನಾಟಕದಲ್ಲೇ. ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ, ಆರು-ಏಳು ವರ್ಷದಲ್ಲಿರುವಾಗಲೇ ಕ್ರಿಕೆಟ್ ನಲ್ಲಿ ಆಸಕ್ತಿ ಬೆಳೆಯಿತು.ಇದನ್ನು ಗುರುತಿಸಿದ ತಂದೆ ಮಗನಿಗೆ ಪ್ರೋತ್ಸಾಹ ನೀಡಿದರು.ಸಾಧನೆಯ ಪ್ರತಿ ಹಂತದಲ್ಲು ಬೆನ್ನು ತಟ್ಟಿದರು. ಇಂದು ಇವರು ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಹೆಮ್ಮೆಯ ಕ್ರಿಕೆಟಿಗ. ಇವರ ಸಾಧನೆ ಕಂಡು ದೇಶವೇ ಬೆರಗಾಗಿದೆ. ಅತಿ ಕಿರಿ ವಯಸ್ಸಿನಲ್ಲೇ ಅತ್ಯುತ್ತಮ ಸಾಧನೆ ಮಾಡಿದ ಹೆಗ್ಗಳಿಕೆ ಇವರದು. ಈಗಾಗಲೇ ಅಂಡರ್ 19 ನ್ಯಾಷನಲ್ ಕ್ರಿಕೆಟ್ ಟೀಂನಲ್ಲಿ ಗುರುತಿಸಿಕೊಂಡು,ಐಪಿಎಲ್ ನಲ್ಲೂ ಬೇಡಿಕೆಯ ಕ್ರೀಡಾ ತಾರೆ ಎಂದೆನಿಸಿಕೊಂಡಿದ್ದಾರೆ. ಇವರ ಕ್ರಿಕೆಟ್ ಪ್ರಯಾಣ ಹಾಗೂ ಅನುಭವ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ರೀನಾ ಡಿಸೋಜಾ ಶೋ -ಎಪಿಸೋಡ್ 3 ವೆಬ್ ಕಾರ್ಯಕ್ರಮದಲ್ಲಿ ನಿರೂಪಕಿ ರೀನಾ ಅವರ ಫಟಾಫಟ್ ಪ್ರಶ್ನೆಗಳಿಗೆ ಉತ್ತರಿಸಿದರು. ಅವರಿಬ್ಬರ ನಡುವೆ ನಡೆದ ಸಂದರ್ಶನದ ತುಣುಕುಗಳು ಇಲ್ಲಿವೆ.

ಸಂದರ್ಶನದಲ್ಲಿ ದೇವದತ್ತ ಮಾತಾಡಿದ್ದೇನು?

ನನ್ನ ಜೀವನವನ್ನೇ ಕ್ರಿಕೆಟ್ ಗಾಗಿ ಮುಡುಪಾಗಿಸಿದ್ದೇನೆ. ನಿಜ ಹೇಳಬೇಕೆಂದರೆ ಆರೇಳು ವರ್ಷವನಾಗಿದ್ದಾಗಲೇ ಗ್ರೌಂಡ್ ಗಿಳಿದು ಕ್ರಿಕೆಟ್ ಆಡಲು ಶುರು ಮಾಡಿದೆ. ಆರಂಭದಲ್ಲಿ ತಮಾಷೆಗಾಗಿ ಆಡುತ್ತಿದ್ದೆ. ದಿನ ಇಡೀ ಅದರಲ್ಲೇ ಟೈಮ್ ಪಾಸ್ ಮಾಡುತ್ತಿದ್ದೆ. ನನಗೆ ಒಂಭತ್ತು ವರ್ಷ ತುಂಬುತ್ತಿದ್ದಂತೆ ಕ್ರಿಕೆಟನ್ನು ಗಂಭೀರವಾಗಿ ತೆಗೆದುಕೊಂಡೆ ಎಂದು ಕ್ರಿಕೆಟ್ ಆಸಕ್ತಿ ಕುರಿತು ವಿವರಿಸಿದರು.

ಶಾಲೆಯಲ್ಲೂ ಪ್ರೋತ್ಸಾಹ ಸಿಕ್ಕಿತು:

ನಾನು ಓದಿದ್ದು ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ. ಇಲ್ಲಿ ಯುವ ಕ್ರಿಕೆಟಿಗರಿಗೆ ಬಹಳಷ್ಟು ಬೆಂಬಲ ನೀಡುತ್ತಾರೆ. ಶಾಲೆಗೆ ಸೇರುವ ಮುನ್ನವೇ ಕ್ಯಾಂಪ್ ಗಳಲೆಲ್ಲಾ ಭಾಗವಹಿಸಿದ್ದೆ. ಕ್ರಿಕೆಟ್ ಜರ್ನಿಗೆ ಈ ಶಾಲೆಯು ತುಂಬಾನೇ ನೆರವಾಗಬಹುದೆನ್ನುವ ಅಗಾಧ ನಂಬಿಕೆ ನನಗಿತ್ತು. ಶಾಲೆಗೆ ಸೇರಿದ ಮೊದಲ ದಿನವೇ ನಾನು ಭೇಟಿಯಾಗಿದ್ದು ಕೋಚ್ ಅವರನ್ನು. ಅವರ ಸಲಹೆ ಸೂಚನೆಗಳು ನನ್ನ ವೃತ್ತಿ ಜೀವನಕ್ಕೆ ಪ್ರಾಮುಖ್ಯತೆ ಪಡೆದಿದ್ದವು. ನನ್ನ ಕ್ರಿಕೆಟ್ ಆಸಕ್ತಿಗೂ,ಶಾಲೆಯಲ್ಲಿ ಸಿಗುತ್ತಿದ್ದ ಬೆಂಬಲಕ್ಕೂ ಹೋಲಿಕೆಯಿದ್ದುದರಿಂದ ನನಗದು ತುಂಬಾ ಸಹಾಯವಾಯಿತು.

ಕಾರ್ಯಕ್ರಮದಲ್ಲಿ ದೇವದತ್ತ ತಂಗಿ ಚಾಂದಿನಿ ಹಾಗೂ ಗೆಳೆಯರು ಪಾಲ್ಗೊಂಡಿದ್ದು,ಶಾಲೆಯ ಹಾಸ್ಯ ಸನ್ನಿವೇಶಗಳನ್ನು ಮೆಲುಕು ಹಾಕಿದರು.
ತಂಗಿ ಚಾಂದಿನಿ ಜತೆಗಿನ ಬಾಲ್ಯದ ತುಂಟಾಟಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಗೆಳೆಯರು ದೇವದತ್ತ ಬಗೆಗಿನ ಕುತೂಹಲಕಾರಿ ವಿಷಯಗಳನ್ನು ತಿಳಿಸಿದರು.

ಸಚಿನ್,ರಾಹುಲ್ ಪ್ರೇರಣೆ

ಅಪ್ಪನಿಗೆ ಕ್ರಿಕೆಟ್ ಅಂದರೆ ತುಂಬಾ ಇಷ್ಟ. ಟಿವಿಯಲ್ಲಿ ಬರುತ್ತಿದ್ದ ಮ್ಯಾಚ್ ಗಳನ್ನೆಲ್ಲ ನೋಡುತ್ತಿದ್ದರು. ನಾನು ಅವರಿಗೆ ಸಾಥ್ ನೀಡುತ್ತಿದ್ದೆ. ಹೀಗೆ
ಚಿಕ್ಕಂದಿನಿಂದಲೇ ಕ್ರಿಕೆಟ್ ನ್ನು ಟಿವಿಯಲ್ಲಿ ನೋಡುತ್ತಾ ಬೆಳೆದೆ. ಸಚಿನ್ ತೆಂಡೂಲ್ಕರ್,ರಾಹುಲ್ ದ್ರಾವಿಡ್ ಕ್ರಿಕೆಟ್ ದಿಗ್ಗಜರೇ ನನಗೆ ಪ್ರೇರಣೆಯಾದರು. ಗೌತಮ್ ಗಂಭೀರ್ ಅವರ ಬ್ಯಾಟಿಂಗ್ ಶೈಲಿ ನನಗೆ ತುಂಬಾ ಇಷ್ಟ ಎಂದರು. ಅಪ್ಪ ನನಗೆ ತುಂಬಾ ಬೆಂಬಲ ನೀಡುತ್ತಿದ್ದರು. ನಾನು ಮ್ಯಾಚ್ ಗೆ ಹೋದ ಕಡೆಯೆಲ್ಲಾ ಬರುತ್ತಿದ್ದರು. ಅವರು ಬಾರದೆ ಇದ್ದರೆ ಬೇಜಾರಾಗುತ್ತಿತ್ತು. ಬಂದರೆ ನನಗೆ ಸ್ಪೂರ್ತಿ. ಅವರ ಬೆಂಬಲ ನನಗೆ ಶಕ್ತಿ ಎಂದರು.

ಗೇಮಿಂಗ್ ಸೆಗ್ ಮೆಂಟ್ :

ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಗೇಮಿಂಗ್ ಸೆಗ್ ಮೆಂಟ್ ನಲ್ಲಿ ದೇವದತ್ತ ಉತ್ಸಾಹದಿಂದ ಪಾಲ್ಗೊಂಡರು. ಮೊದಲ ಗೇಮ್ ನಲ್ಲಿ ಮೂರು ಅವಕಾಶಗಳನ್ನು ಪಡೆದರೂ ಸೋಲನ್ನನುಭವಿಸಬೇಕಾಯಿತು. ಎರಡನೇ ಗೇಮ್ ನಲ್ಲಿ ಚಾಂದಿನಿ(ದೇವದತ್ತ ತಂಗಿ) ಎಸೆದ ಬಾಲ್ ಗೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದಾದ ಬಳಿಕ ಬ್ಯಾಟ್ ಹಾಗೂ ಟೀ ಶರ್ಟ್ ಗೆ ಹಸ್ತಾಕ್ಷರ ನೀಡಿದರು.

ಬ್ಯಾಟಿಂಗ್ ಕೊಡದ್ದಕ್ಕೆ ಅತ್ತೇ ಬಿಟ್ಟೆ:

ನಾನು ಬೆಂಗಳೂರಿಗೆ ಕಾಲಿಟ್ಟಾಗ ಸಣ್ಣ ಹುಡುಗ. ಶಾಲೆಯಲ್ಲಿ ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಪ್ರಾಕ್ಟೀಸ್ ಮಾಡುತ್ತಿದ್ದರು. ಆ ಸಮಯದಲ್ಲಿ ಕೋಚ್ ನನ್ನನ್ನು ಬೌಲರ್ ಎಂದು ಭಾವಿಸಿದ್ದರು. ಬ್ಯಾಟಿಂಗ್ ಗೆ ಅವಕಾಶ ಕೊಡಲಿಲ್ಲ. ಮೊದಲ ದಿನ ಓಕೆ..ಮುಂದಿನ ದಿನಗಳಲ್ಲಿ ಸಿಗಬಹುದು ಎಂದು ಮೌನವಾದೆ. ಆದರೆ ನಾನಂದು ಕೊಂಡ ಹಾಗೆ ನಡೆಯಲಿಲ್ಲ. ದಿನಗಳುರುಳಿದರೂ ಬ್ಯಾಟಿಂಗ್ ಗೆ ಅವಕಾಶವೇ ಸಿಗಲಿಲ್ಲ. ಅತ್ತು ಬಿಟ್ಟೆ. ಅಮ್ಮನ ಬಳಿ ಹೇಳಿದೆ. ಅವರು ಸರ್ ಗೆ ಕಾಲ್ ಮಾಡಿ ನನ್ನ ಮಗನಿಗೆ ಬ್ಯಾಟಿಂಗ್ ಗೆ ಅನುವು ಮಾಡಿ ಕೊಡಿ ಎಂದರು. ಅಲ್ಲಿಂದ ಅವಕಾಶ ಸಿಕ್ಕಿತು. ನನ್ನ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಸರ್ ಗೆ ಆತ್ಮವಿಶ್ವಾಸ ಮೂಡಿತು.

ಕೋಚ್ ನಾಸಿರುದ್ದೀನ್ ಹಾರೈಕೆ:

ದೇವದತ್ ಗೆ 11 ವರ್ಷ ಆಗಿದ್ದಾಗ ನಾನು ಕೋಚಿಂಗ್ ಮಾಡಲು ಶುರು ಮಾಡಿದೆ. ಅವನ ಗಮನ ಕೇವಲ ಕ್ರಿಕೆಟ್ ಕಡೆಗಿತ್ತು. ಆತನ ಗುರಿ ಇಂಡಿಯಾ ಅಂಡರ್ 19ನಲ್ಲಿ ಪ್ರತಿನಿಧಿಸುವುದಾಗಿತ್ತು. ಅದನ್ನು ತಲುಪಿದ್ದಾನೆ. ಮುಂದಿನ ಐದು ವರ್ಷಗಳಲ್ಲಿ ಇಂಡಿಯಾ ನ್ಯಾಷನಲ್ ಟೀಂನಲ್ಲಿ ನೋಡಲಿಚ್ಚಿಸುತ್ತೇನೆ. ಅವನಿಗೆ ಎಲ್ಲಾ ಗೆಲುವು ಸಿಗಲಿ ಎಂದು ಕೋಚ್ ಮೊಹಮ್ಮದ್ ನಾಸಿರುದ್ದೀನ್ ಶುಭ ಹಾರೈಸಿದರು.

ಎಜುಕೇಟಿವ್ ಸೆಗ್ ಮೆಂಟ್:

ಇಲ್ಲಿ ದೇವದತ್ತ ಅವರು ಯುವ ಕ್ರಿಕೆಟಿಗರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ನೀವು ಕ್ರಿಕೆಟನ್ನು ಪ್ರೀತಿಸಿ. ಅದು ನಿಮ್ಮನ್ನು ಪ್ರೀತಿಸುತ್ತದೆ. ಹೆಸರು,ಹಣ ಇತ್ಯಾದಿಗಳ ಬಗ್ಗೆ ಯೋಚಿಸಬೇಡಿ. ನಿಮ್ಮನ್ನು ನೀವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಸಮಯ ನಿಗದಿ ಮಾಡಿಕೊಳ್ಳಿ. ಪ್ರತಿ ದಿನ ಪ್ರಾಕ್ಟ್ಟೀಸ್ ಮಾಡಿ. ಆಟವನ್ನು ಆನಂದಿಸಿ ಎಂದರು. ನಿಮ್ಮನ್ನು ಕಂಡಾಗ ಯುವ ಕ್ರಿಕೆಟಿಗರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ದೇವ್,ನಾನು ವಿದ್ಯಾ ಸಂಸ್ಥೆ ಅಥವಾ ಪ್ರಾಕ್ಟೀಸ್ ಗೆ ಹೋದಾಗಲೆಲ್ಲ ನನ್ನ ಬಳಿ ಬಂದು ಸಲಹೆಗಳನ್ನು ಕೇಳುತ್ತಾರೆ. ಆಗ ನಾನು ಅವರಿಗೆ ಹೇಳುವುದುಂಟು ನೀವು ಕೋಚ್ ಬಳಿ ಮಾತುಕತೆ ನಡೆಸಿ ಎಂದು. ಏಕೆಂದರೆ ನಾನು ಕೂಡ ಕಲಿಯುತ್ತಿದ್ದೇನೆ. ಕ್ರಿಕೆಟ್ ನಲ್ಲಿ ಕಲಿವುದು ತುಂಬಾ ಇದೆ.

ಫೂಡ್ ಟೇಸ್ಟಿಂಗ್ ಸೆಗ್ ಮೆಂಟ್ :

ದೇವ್ ಹಾಗೂ ಅವರ ತಂಗಿ ಚಾಂದ್ನಿ ಅವರಿಗೆ ಸವಿಯಲು ಎರಡು ಬಗೆಯ ಖಾದ್ಯಗಳು ರೆಡಿಯಾಗಿದ್ದವು. ಗಿಲ್ಲಿಸ್ ಚಿಲ್ಲಿ ಚಿಕನ್ ಮತ್ತು ಚಿಕನ್ ಲಾಲಿ ಪಪ್. ಇವುಗಳನ್ನು ಸವಿದು ಮೆಚ್ಚುಗೆ ಸೂಚಿಸಿದರು.

ರಾಪಿಡ್ ಫಾಯರ್ ಸೆಗ್ ಮೆಂಟ್:

ಇಲ್ಲಿ ಕೆಲವು ವೈಯಕ್ತಿಕ ಪ್ರಶ್ನೆಗಳನ್ನು ಇವರ ಮುಂದೆ ಇಡಲಾಗಿತ್ತು. ಅದೆಲ್ಲ ಪ್ರಶ್ನೆಗಳಿಗೆ ದೇವದತ್ತ ಸಮಧಾನದಿಂದ ಉತ್ತರಿಸಿದರು. ನೀವು ನಿಮ್ಮ ಮೊಬೈಲ್ ನಿಂದ ಯಾರಿಗೆ ಕೊನೆಯ ಮೆಸೆಜ್ ಕಳಿಸಿದ್ರಿ? ಎಂಬ ಪ್ರಶ್ನೆಗೆ ,ನನ್ನ ಅಮ್ಮನಿಗೆ ಎಂದು ಉತ್ತರಿಸಿದರು. ನಿಮ್ಮ ಫೆವರಿಟ್ ತಿಂಗಳು ಯಾವುದು? ಎಂಬ ಪ್ರಶ್ನೆಗೆ ಜುಲೈ ಎಂದರು. ಯಾವ ಕೆಲಸ ನಿಮಗೆ ಭಯಾನಕ ಎಂದೆನಿಸುತ್ತದೆ?ಎಂಬುದಕ್ಕೆ ,ಜನರೊಂದಿಗೆ ಮಾತನಾಡುವುದು ಎಂದು ಹೇಳಿದರು. ಕಾರ್ಯಕ್ರಮದ ಕೊನೆ ಹಂತದಲ್ಲಿ ದೇವ್ ದತ್ತ ಅವರಿಗೆ ಲೀವ್ ಆಕ್ಟೀವ್ ಅವರ ಕಡೆಯಿಂದ ಗಿಫ್ಟ್ ಹ್ಯಾಂಪರ್ ನೀಡಲಾಯಿತು. ನಂತರ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯ ಕೇಳಲಾಯಿತು. ದೇವದತ್ತ ಹಾಗೂ ಚಾಂದಿನಿ ಒಳ್ಳೆಯ ಕಾರ್ಯಕ್ರಮ, ನಮಗೆ ತುಂಬಾ ಇಷ್ಟವಾಯಿತು ಎಂದರು.

– ದಯಾಮಣಿ ಹೇಮಂತ್