-ರೀನಾ ಡಿಸೋಜಾ ಶೋ ದಲ್ಲಿ ಚಿನ್ನದ ಹುಡುಗನ ಮಾತು
-ಆತ್ಮವಿಶ್ವಾಸವೇ ಸಾಧನೆಗೆ ಪ್ರೇರಣೆ
ತನಗೆ ನೋವಿದ್ದರೂ ನೋವನ್ನು ನುಂಗಿ ದೇಶಕ್ಕೆ ಪದಕ ತಂದು ಕೊಟ್ಟರು. ಕಾಮನ್ ವೆಲ್ತ್ ಕೂಟದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಕಳೆದು ಕೊಂಡರೂ ಸಾಧಿಸುವಲ್ಲಿ ಯಶಸ್ವಿಯಾದರು. ಅವರೇ ನಮ್ಮ ದೇಶದ ತಮಿಳ್ನಾಡು ರಾಜ್ಯದ ಸತೀಶ್ ಶಿವಲಿಂಗಮ್. ವೇಟ್ ಲಿಫ್ಟಿಂಗ್ ನಲ್ಲಿ ಅಮೋಘ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದ ಹೆಗ್ಗಳಿಕೆ ಇವರದ್ದು. ತನಗೆ ಕಾಣಿಸಿ ಕೊಂಡ ವಿಪರೀತ ನೋವು ಅವರ ಸಾಧನೆಗೆ ಅಡ್ಡಿಯಾಗುತ್ತೆನೋ ಎನ್ನುವ ಭಯವು ಅವರ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡಿತ್ತು. ಆದರೆ ಮನಸ್ಸಿನ ಒಂದು ಮೂಲೆಯಲ್ಲಿದ್ದ ಅವರ ಆತ್ಮವಿಶ್ವಾಸವೇ ಅವರಿಗೆ ಪ್ರೇರಣೆಯಾಯಿತು. ಮನೆಯವರು,ಗೆಳೆಯರ ಪ್ರೋತ್ಸಾಹವೇ ಇನ್ನಷ್ಟು ಸಾಧನೆಗೆ ಸ್ಫೂರ್ತಿಯಾಯಿತು. ಹೌದು, ವೆಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ದಿ ರೀನಾ ಡಿಸೋಜಾ ಶೋ ಕಾರ್ಯಕ್ರಮದಲ್ಲಿ ಸತೀಶ್ ಅವರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವೇಟ್ ಲಿಫ್ಟಿಂಗ್ ನ ಸಾಧನಾ ಹಾದಿಯ ಅನುಭವಗಳನ್ನು ಹಂಚಿ ಕೊಂಡರು. ಖ್ಯಾತ ಕ್ರೀಡಾ ನಿರೂಪಕಿ ರೀನಾ ಡಿಸೋಜ ಅವರು ಸತೀಶ್ ಅವರನ್ನು ಸಂದರ್ಶಿಸಿದರು. ಅವರಿಬ್ಬರ ನಡುವೆ ನಡೆದ ಸಂವಾದದ ತುಣುಕುಗಳು ಇಲ್ಲಿವೆ.
2014 ಅದೃಷ್ಟದ ವರ್ಷ
2014ನೇ ವರ್ಷ ನನ್ನ ಭಾಗ್ಯದ ಬಾಗಿಲು ತೆರೆದು ಕೊಂಡ ವರ್ಷವಾಗಿತ್ತು. ಈ ಹಿಂದೆ ಯಾರೂ ನನ್ನನ್ನು ಗುರುತಿಸರಿರಲಿಲ್ಲ. ಗ್ಲ್ಯಾಸ್ಕೊದಲ್ಲಿ ಪದಕ ಗೆದ್ದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಮನೆಗೆ ಫೋನ್ ಕರೆಗಳು ಬರುತ್ತಲೇ ಇದ್ದವು. ಎಲ್ಲಾ ಮಾಧ್ಯಮದವರು ಕಾಲ್ ಮಾಡಿ ,ಸತೀಶ್ ಯಾವಾಗ ಫ್ರೀ ಇರುತ್ತಾರೆ, ಅವರ ಸಂದರ್ಶನ ಸಿಗಬಹುದಾ ಎಂದು ಕೇಳುತ್ತಿದ್ದರು. ನನಗಾಗಿ ಮನೆ ಬಾಗಿಲ ಮುಂದೆ ಬಂದು ಕಾಯುತ್ತಿದ್ದರು. ನಾನು ಚಿನ್ನದ ಪದಕ ಗೆದ್ದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ತಮಿಳ್ನಾಡು ರಾಜ್ಯದಿಂದ ಚಿನ್ನ ಗೆದ್ದ ಆ ಯುವಕ ಯಾರು ಎಂಬ ಪ್ರಶ್ನೆಗಳು ಹರಿದಾಡುತ್ತಿದ್ದವು. ಯಾಕೆಂದರೆ ನಾನೊಂದು ಸಣ್ಣ ಹಳ್ಳಿ ಪ್ರದೇಶದಿಂದ ಬಂದವನು. ಇವನ ಅಭ್ಯಾಸ ಎಲ್ಲಿ ನಡೆಯಿತು. ಹೇಗೆ ನಡೆಯಿತು? ಚಿನ್ನದ ಪದಕ ಗೆಲ್ಲಲು ಇವನ ಪ್ರಯತ್ನ ಎಷ್ಟರ ಮಟ್ಟಿಗಿತ್ತು ಎಂಬುದರ ಬಗ್ಗೆ ಜನರಿಗೆ ಕುತೂಹಲ ಮೂಡಿತ್ತು.
ನೋವನ್ನು ಲೆಕ್ಕಿಸದೇ ಚಿನ್ನ ಗೆದ್ದೆ
2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆಲ್ಲುವುದು ತುಂಬಾ ಕಷ್ಟದ ವಿಷಯವಾಗಿತ್ತು. ಜತೆಗೆ ಸವಾಲು ಆಗಿತ್ತು. ಅದರಲ್ಲೂ ಚಿನ್ನದ ಪದಕ ಗೆದ್ದಿರುವುದು ಬಹು ದೊಡ್ಡ ವಿಷಯವೂ ಹೌದು. ಕಾಮನ್ ವೆಲ್ತ್ ಗೇಮ್ ಗೂ ಮುನ್ನ ನನಗೆ ಗಾಯವಾಗಿತ್ತು. ಇದರಿಂದ ನನ್ನ ಮನಸಿಗೆ ತುಂಬಾ ನೋವಾಯಿತು. ಯಾವುದೇ ಕೆಲಸಗಳನ್ನು ಮಾಡಲಾಗುತ್ತಿರಲಿಲ್ಲ. ನನ್ನೆಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಯಿತು. 20 ಕೆಜಿ ರಾಡನ್ನು ಎತ್ತಲು ಅಸಾಧ್ಯವಾಗುತ್ತಿತ್ತು. ಈ ಸಂಬಂಧ ನಾನು ಫಿಸಿಯೋ ಹಾಗೂ ಡಾಕ್ಟರ್ ಮೊರೆ ಹೋದೆ. ಕಾಮನ್ ವೆಲ್ತ್ ಗೇಮ್ ಗೂ ಮುನ್ನ ಕೊನೆಗೂ ಫಿಸಿಯೋ ಸಿಕ್ಕಿದ್ದರು. ಅವರು ನಾವು ಗುಣ ಪಡಿಸುತ್ತೇವೆ ಎಂದು ನನಗೆ ಧೈರ್ಯ ತುಂಬಿದರು. ಕಾಮನ್ ವೆಲ್ತ್ ಗೇಮ್ಸ್ ಗೂ 2 ತಿಂಗಳು ಮುನ್ನ ಯಾವುದೇ ರೀತಿಯ ಅಭ್ಯಾಸವೂ ನಡೆದಿರಲಿಲ್ಲ. ಹೀಗಾಗಿ ನನಗೆ ಪದಕ ಗೆಲ್ಲುವ ಬಗ್ಗೆ ಸಂಶಯವಿತ್ತು. ನೋಡೋಣ ಪ್ರಯತ್ನ ಮಾಡುತ್ತೇನೆ ಎಂದು ಪಾಲ್ಗೊಂಡೆ. ನಾನು ನೋವಿನಲ್ಲೂ ಚಿನ್ನ ಗೆದ್ದಿದ್ದು ಮರೆಯಲಾಗದ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದರು ಸತೀಶ್.
ನೌಕರಿಗಾಗಿ ವೇಟ್ ಲಿಫ್ಟಿಂಗ್ ಕಲಿತೆ
ನನ್ನ ಸಾಧನೆಗೆ ಮನೆಯವರ ಸಹಕಾರ ತುಂಬಾನೇ ಇದೆ. ನನಗೆ ನೋವು ಕಾಣಿಸಿ ಕೊಂಡಿದ್ದಾಗ ತಂದೆ – ತಾಯಿ ಬೇಗ ಗುಣ ಮುಖವಾಲೆಂದು ದೇವಾಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಿದ್ದರು. ಅಪ್ಪ ಕೆಲಸದಲ್ಲಿದ್ದರು. ಅವರಿಗೆ 2001ರಲ್ಲಿ ಕೆಲಸದಿಂದ ನಿವೃತ್ತಿಯಾಯಿತು. ನಾನು ಏನಾದರೂ ಸರ್ಕಾರಿ ನೌಕರಿ ಹಿಡಿಯಬೇಕೆಂದು ನಿರ್ಧರಿಸಿದೆ. ಕ್ರೀಡಾ ಕ್ಷೇತ್ರದತ್ತ ಒಲವು ತೋರಿಸಿದೆ. ತಮಿಳ್ನಾಡಿನ ವೆಲ್ಲೂರು ಜಿಲ್ಲೆಯ ಸತ್ವಾಚಾರಿ ಗ್ರಾಮದಲ್ಲಿ ಒಳ ಹೋಗುತ್ತಿದ್ದಂತೆ ದೇವಾಸ್ಥಾನವೊಂದು ಸಿಗುತ್ತದೆ. ಅಲ್ಲೇ ವೇಟ್ ಲಿಫ್ಟಿಂಗ್ ಸಂಸ್ಥೆ ಇರೋದು. ಅಲ್ಲಿ ಸ್ಪೋರ್ಟ್ಸ್ ಖೋಟಾದಡಿಯಲ್ಲಿ ನೌಕರಿ ಸಿಗಲು ತಯಾರು ಮಾಡುತ್ತಿದ್ದರು. ನನ್ನ ಗುರಿ ಒಂದೇ . ನನಗೆ ಸರ್ಕಾರಿ ಕೆಲಸ ಬೇಕು ಎಂದು. ಇದಕ್ಕಾಗಿ ಕೈ ಮೀರಿ ಪ್ರಯತ್ನ ಮಾಡಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೆಡಲ್ ಸಿಕ್ಕಿತು. ನನಗೆ 16 ವರ್ಷವಾಗುತ್ತಿದ್ದಂತೆ ನನ್ನ ಕನಸು ನನಸಾಗುವ ಕಾಲ ಸನ್ನಿಹಿತವಾಯಿತು. ಕೆಲಸವೂ ಸಿಕ್ಕಿತು.
ತಂದೆ- ತಾಯಿ ಪ್ರೋತ್ಸಾಹ
ತಂದೆ – ತಾಯಿ ತ್ಯಾಗವನ್ನು ನಾನೆಂದು ಮರೆಯುವಂತಿಲ್ಲ ಎನ್ನುವ ಸತೀಶ್ ಅವರು, ಅಭ್ಯಾಸ ಮಾಡುವ ವೇಳೆ ಅವರು ಮಗನನ್ನು ಹೇಗೆ ನೋಡಿಕೊಳ್ಳುತ್ತಿದ್ದರು ಎನ್ನುವ ಬಗ್ಗೆ ಇಲ್ಲಿ ಸ್ಮರಿಸಿಕೊಂಡಿದ್ದಾರೆ. ಹಣದ ಸಮಸ್ಯೆ ಎದುರಾದಾಗ ಅದ್ಯಾವುದನ್ನು ತೋರ್ಪಡಿಸದೇ ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತರು. ಅಪ್ಪ ಕೂಡ ವೇಟ್ ಲಿಫ್ಟರ್ ಆಗಿರುವುದರಿಂದ ಅನುಭವಸ್ಥರಾಗಿ ಸಾಕಷ್ಟು ಸಲಹೆ ನೀಡುತ್ತಿದ್ದರು. ಅಮ್ಮನ ಶಿಸ್ತು ,ಸಮಯ ಪ್ರಜ್ಞೆ, ನಿಯಮ ಮತ್ತು ನಿಭಂಧನೆಗಳು ಹಾಗೂ ಒಳ್ಳೆ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನೀಡಿರುವ ಸಲಹೆಗಳು ನನ್ನ ಜೀವನಕ್ಕೆ ಪಾಠವಾಯಿತು. ಗೆಳೆಯರೊಂದಿಗೆ ಹರಟೆ ಹೊಡೆಯಲು, ಸುತ್ತಾಡಲು,ಫಿಲ್ಮ್ ನೋಡಲು ಇದ್ಯಾವುದಕ್ಕೂ ಅವಕಾಶ ನೀಡುತ್ತಿರಲಿಲ್ಲ. ಇತಿಮಿತಿ ಮೀರಿ ಯಾವುದನ್ನು ದಾಟುವಂತಿರಲಿಲ್ಲ. ವೇಟ್ ಲಿಫ್ಟಿಂಗ್ ನಲ್ಲಿನ ನಿರಂತರ ಅಭ್ಯಾಸ ಮತ್ತು ಅರ್ಪಣಾ ಮನೋಭಾವ, ತಂದೆ ತಾಯಿ ಪ್ರೋತ್ಸಾಹ, ದೇವರ ಮೇಲೆ ಇಟ್ಟಿರುವ ನಂಬಿಕೆ ನನ್ನನ್ನು ಈ ಮಟ್ಟದವರೆಗೆ ತಂದು ನಿಲ್ಲಿಸಿದೆ ಎಂದರು.
ಸೆಗ್ ಮೆಂಟ್ಸ್
ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಗೇಮಿಂಗ್ ಸೆಗ್ ಮೆಂಟ್ ನಲ್ಲಿ ಸತೀಶ್ ಅವರು ಪಾಲ್ಗೊಂಡು ಆಟ ಆಡಿ ಮನರಂಜಿಸಿದರು. ಮೊದಲ ಗೇಮ್ ನಲ್ಲಿ ಐದು ಅವಕಾಶಗಳನ್ನು ಪಡೆದು ಕೊಂಡರೂ ಸೋಲುಂಡರು. ಆದರೆ ಅಲ್ಲಿ ಕೇಳಲಾಗಿದ್ದ ಎಲ್ಲಾ ಪ್ರಶ್ನೆಗಳಿಗೆ ಫಟಾಫಟ್ ಉತ್ತರ ನೀಡಿದರು. ಗೇಮಿಂಗ್ ಸೆಗ್ ಮೆಂಟ್ ನಲ್ಲಿ ಸೋಲುಂಡ ತಪ್ಪಿಗೆ ಜ್ಯೂಸ್ ಕುಡಿಯುವ ಮೂಲಕ ಸಣ್ಣ ಶಿಕ್ಷೆಗೆ ಗುರಿಯಾದರು. ಇದಾದ ನಂತರ ಸತೀಶ್ ಅವರು ಶರ್ಟ್,ಫಲಕ,ಬ್ಯಾಟ್ ಗಳಿಗೆ ಹಸ್ತಾಕ್ಷರ ನೀಡಿದರು.
ಎಜುಕೇಟಿವ್ ಸೆಗ್ ಮೆಂಟ್ ನಲ್ಲಿ ನಿರಂಜನ್ ಅವರು ಯುವ ವೇಟ್ ಲಿಫ್ಟರ್ ಗಳಿಗೆ ವೇಟ್ ಲಿಫ್ಟಿಂಗ್ ಕುರಿತಂತೆ ಸಲಹೆ ನೀಡಿದರು. ಶಿಕ್ಷಣ ಅತ್ಯವಶ್ಯಕ. ವೇಟ್ ಲಿಫ್ಟಿಂಗ್ ನ ನಿಯಮ ನಿಭಂಧನೆಗಳು ತಿಳಿದು ಕೊಂಡಿದ್ದರೆ ತುಂಬಾ ಪ್ರಯೋಜನಕ್ಕೆ ಬರುತ್ತದೆ. ಉತ್ತಮ ಕೋಚ್ ಗಳನ್ನು ಆಯ್ಕೆ ಮಾಡಿ. ಅವರ ಮಾರ್ಗದರ್ಶನ ನಿಮ್ಮ ಏಳಿಗೆಗೆ ನೆರವಾಗುತ್ತದೆ ಎಂದು ಸಲಹೆ ನೀಡಿದರು. ಫೂಡ್ ಟೇಸ್ಟಿಂಗ್ ಸೆಗ್ ಮೆಂಟ್ ನಲ್ಲಿ ಸತೀಶ್ ಅವರು ಖಾದ್ಯಗಳ ಸವಿಯನ್ನು ಸವಿದರು. ರಾಪಿಡ್ ಫಾಯರ್ ನಲ್ಲಿ ಕೇಳಲಾಗಿದ್ದ ಎಲ್ಲಾ ಪ್ರಶ್ನೆಗಳಿಗೆ ಸತೀಶ್ ಅವರು ಆರಾಮವಾಗಿ ಉತ್ತರ ನೀಡಿದರು. ಈ ಮಧ್ಯೆ ತಮಿಳು ಹಾಡೊಂದನ್ನು ಸತೀಶ್ ಅವರಿಂದ ಹಾಡಿಸಲಾಯಿತು. ತಮಿಳು ಭಾಷೆಯಲ್ಲಿ ಮಾತನಾಡುತ್ತಾ ತಮಿಳು ನಾಡಿನ ಜನತೆಗೆ ನಮಸ್ಕಾರ. ನಿಮ್ಮ ಪ್ರೀತಿ,ಪ್ರೋತ್ಸಾಹಕ್ಕೆ ಆಭಾರಿಯಾಗಿದ್ದೇನೆ ಎಂದರು. ಕಾರ್ಯಕ್ರಮದ ಕೊನೆ ಹಂತದಲ್ಲಿ ಲೀವ್ ಆಕ್ಟೀವ್ ಅವರ ಕಡೆಯಿಂದ ಗಿಫ್ಟ್ ಹ್ಯಾಂಪರ್ ನೀಡಲಾಯಿತು.
– ದಯಾಮಣಿ ಹೇಮಂತ್