Image from post regarding 2018ರ ಯೂ ಟ್ಯೂಬ್ ಹಿಟ್ ಹಾಡುಗಳು..
ಹಾಡುಗಳಿರದೇ ಸಿನಿಮಾ ಪರಿಪೂರ್ಣವಾಗಲಾರದು. ಕೆಲವು ಸಿನಿಮಾಗಳು ಹಾಡುಗಳಿಂದಲೇ ಹಿಟ್ ಆಗಿರುವ ಉದಾಹರಣೆಗಳು ಇವೆ. ಇನ್ನು ಕೆಲವು ಹಾಡುಗಳು ಸಿನಿಮಾ ಇಷ್ಟವಾಗದೇ ಇದ್ದರೂ ಅದರ ಹಾಡುಗಳು ಕೇಳುಗರ ಮೆಚ್ಚುಗೆ ಪಡೆದಿವೆ. ಕಳೆದ ವರ್ಷವೂ ಹೆಚ್ಚಿನ ಹಾಡುಗಳು ಯೂ ಟ್ಯೂಬ್ ನಲ್ಲಿ ಹವಾ ಎಬ್ಬಿಸಿ ಬಿಟ್ಟಿವೆ. ಒಂದಕ್ಕಿಂತ ಒಂದು ಸೂಪರ್ ಹಾಡುಗಳದ್ದೇ ಕಲರವ. ಸಭೆ, ಮದುವೆ ಸಮಾರಂಭ,ಶಾಲಾ ವಾರ್ಷಿಕೋತ್ಸವ,ಬಸ್,ಕಾರು,ಬೈಕ್ ಓಡಾಟದಲ್ಲಿಯೂ ಹಾಡುಗಳನ್ನು ಕೇಳಿ ಮಜಾ ಮಾಡುವವರು ಹಲವು ಮಂದಿ. ಹೀಗೆ ಎಲ್ಲೆಂದರಲ್ಲಿ ಹಾಡುಗಳದ್ದೇ ಕಂಪು. ಇಂದು ಸಿನಿಮಾ ಹಾಡುಗಳ ಅಬ್ಬರ ಜೋರಾಗಿದೆ. ಸ್ಯಾಂಡಲ್ ವುಡ್ ನಲ್ಲಂತು ಮೇಲಿಂದ ಮೇಲೆ ಸೂಪರ್ ಹಾಡುಗಳು ಬರುತ್ತಲೇ ಇವೆ.
ಒಂದು ಹಾಡು ಯೂ ಟ್ಯೂಬ್ ನಲ್ಲಿ ಹಿಟ್ ಎಂದೆನಿಸಿ ಕೊಂಡರೆ ಅದರ ದಾಖಲೆ ಅಳಿಸಿ ಹಾಕುವಷ್ಟರ ಮಟ್ಟಿಗೆ ಮತ್ತೊಂದು ಹಾಡು ತನ್ನ ಸ್ಥಾನವನ್ನು ಅಲಂಕರಿಸುತ್ತದೆ. ಇದೆಲ್ಲದರ ಕ್ರೆಡಿಟ್ ಗೀತ ರಚನಕಾರರು,ಸಂಗೀತ ನಿರ್ದೇಶಕರು ಹಾಗೂ ಗಾಯಕರಿಗೆ ಸಲ್ಲುತ್ತದೆ. ಒಳ್ಳೆಯ ಹಾಡುಗಳಿಗೆ ಯಾವಾಗಲೂ ಬೆಲೆ ಇದೆ. ಆದರೆ ಕಾಲಕ್ಕೆ ತಕ್ಕ ಹಾಗೆ ಸಂಗೀತ,ಸಾಹಿತ್ಯದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಒಂದೊಳ್ಳೆ ಹಾಡು ಬಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರು ಅದನ್ನು ಇಷ್ಟ ಪಡುತ್ತಾರೆ. 2018ರ ಯೂಟ್ಯೂಬ್ ನಲ್ಲಿ ಟಾಪ್ ಲಿಸ್ಟ್ ನಲ್ಲಿರುವ ಹಾಡುಗಳ ಬಗ್ಗೆ ತಿಳಿಯೋಣ.
ಟಗರು ಬಂತು ಟಗರು (ಟಗರು)
ಬ್ಲಾಕ್ ಬಸ್ಟರ್ ಚಿತ್ರ ಟಗರು. ಈ ಸಿನಿಮಾದ ಹಾಡು ಟಗರು ಬಂತು ಟಗರು ಟ್ರೆಂಡ್ ಕ್ರಿಯೆಟ್ ಮಾಡಿತ್ತು. ಈ ಹಾಡಿನ ವೀಕ್ಷಕರ ಸಂಖ್ಯೆ ಸುಮಾರು 30,323,998ರಷ್ಟು. ಇದರಲ್ಲಿ ಶಿವಣ್ಣ ಅವರ ಗೆಟಪ್ ,ಡಾನ್ಸ್ ಹಾಡಿನ ವರ್ಚಸ್ಸನ್ನೇ ಹೆಚ್ಚಿಸಿದೆ. ಈ ಚಿತ್ರದ ಬಲ್ಮ ಎಂಬ ಹಾಡು ಕೂಡ ಹಿಟ್ ಲಿಸ್ಟ್ನಲ್ಲಿದೆ. ಟಗರು ಬಂತು ಟಗರು ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಬಲ್ಮ (ಟಗರು)
ಬಲ್ಮ ಹಾಡು ಟಗರು ಚಿತ್ರದ ಇನ್ನೊಂದು ಹಿಟ್ ಹಾಡು. ಜಯಂತ್ ಕಾಯ್ಕಿಣಿ ಈ ಹಾಡನ್ನು ಅದ್ಬುತವಾಗಿ ಬರೆದಿದ್ದಾರೆ. ಹಾಡುಗಳ ಪ್ರತಿಯೊಂದು ಸಾಲುಗಳು ಕೇಳುಗಗನ್ನು ತಲೆದೂಗಿಸುವಂತೆ ಮಾಡುತ್ತಿದೆ.
ನಾವ್ ಮನೆಗೆ ಹೋಗೋದಿಲ್ಲ (ವಿಕ್ಟರಿ-2)
ಭಟ್ರು ಹಾಡಿನ ಸಾಲುಗಳು ಕಿಕ್ ಕೊಡುವಂತಿದೆ. ನಾವ್ ಮನೆಗೆ ಹೋಗೋದಿಲ್ಲ..ನಮ್ಗೆ ಬಾಗಿಲು ತೆಗೆಯೋರಿಲ್ಲ..ಇಲ್ಲ,ಇಲ್ಲ,ಇಲ್ಲ …ಹೀಗೆ ಆರಂಭವಾಗುವ ಹಾಡು ಯೂ ಟ್ಯೂಬ್ ನಲ್ಲಿ ಸಂಚಲನ ಉಂಟು ಮಾಡಿತ್ತು. ಹಾಡು ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಲಕ್ಷಗಟ್ಟಲೇ ವೀಕ್ಷಕರ ಸಂಖ್ಯೆಯನ್ನು ದಾಟಿತ್ತು. ಈ ಹಿಂದೆ ವಿಕ್ಟರಿ ಚಿತ್ರದ ಹಾಡು ಖಾಲಿ ಕ್ವಾಟ್ರು ಬಾಟಲಿ ಹಂಗೆ ಲೈಫ್ ಎಂಬ ಹಾಡು ಕೂಡ ಶೋತೃಗಳ ಮೆಚ್ಚುಗೆ ಪಡೆದಂತೆ ವಿಕ್ಟರಿ -2 ಚಿತ್ರದಲ್ಲಿಯೂ ಅದೇ ಶೈಲಿಯ ಹಾಡನ್ನು ರೆಡಿ ಮಾಡಿದರು. ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿದರೆ,ಯೋಗರಾಜ್ ಭಟ್ ಅವರದು ಸಾಹಿತ್ಯವಿದೆ. ಅರ್ಜುನ್ ಜನ್ಯ ಅವರದು ಸಂಗೀತ ನಿರ್ದೇಶನವಿದೆ.
ಬದುಕಿನ ಬಣ್ಣವೇ (ಟಗರು)
ಈ ಹಾಡಿನ ಸಾಹಿತ್ಯವೇ ಜಾದೂ ಮಾಡಿದೆ. ಜಯಂತ್ ಕಾಯ್ಕಿಣಿಯವರ ಸಾಹಿತ್ಯವೇ ಅಂಥದ್ದು. ಅವರ ಎಲ್ಲಾ ಹಾಡುಗಳು ಬದುಕಿಗೆ ಹತ್ತಿರವಾಗುತ್ತವೆ. ಹಾಡಿರುವ ಶೈಲಿ ಹಾಗೂ ಚಿತ್ರದ ಚಿತ್ರೀಕರಣ ಕೂಡ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುವಂತಿದೆ. ಕಳೆದ ವರ್ಷ ಹಿಟ್ ಮೇಲೆ ಹಿಟ್ ಹಾಡುಗಳನ್ನು ನೀಡಿದ ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೆ ಧನ್ಯವಾದ ಹೇಳಲೇ ಬೇಕು. ಈ ಹಾಡಿನ ಮೂಲ ಗಾಯಕರು ಸಿದ್ದಾರ್ಥ್ ಬೆಳ್ಮಣ್ಣು.
ದಡ್ಡ(ಸ.ಹಿ.ಪ್ರಾ.ಶಾಲೆ ಕಾಸರಗೋಡು)
ಕನ್ನಡದ ಟಾಪ್ ಹಾಡುಗಳ ಪಟ್ಟಿಯಲ್ಲಿ ಇದು ಸೇರಿಕೊಂಡಿದ್ದು ಅತ್ಯುತ್ತಮ ಸಾಹಿತ್ಯದಿಂದ. ತಿಲಕ್ ತ್ರಿವಿಕ್ರಮ ಈ ಹಾಡನ್ನು ಬರೆದಿದ್ದು, ವಾಸುಕಿ ವೈಭವ್ ಅವರು ಈ ಹಾಡನ್ನು ಹಾಡಿ ಯಶಸ್ಸಿಗೆ ಕಾರಣರಾಗಿದ್ದಾರೆ.
ಚನೂರನು(ಮುಫ್ತಿ )
ಶಿವಣ್ಣ,ಶ್ರೀ ಮುರಳಿ ಅಭಿನಯಿಸಿರುವ ಈ ಚಿತ್ರದ ಹಾಡುಗಳು ಕೂಡ ಸಖತ್ ಮಜಾ ನೀಡುತ್ತವೆ. ಅದರಲ್ಲೂ ಸಾಯಿ ಸರ್ವೇಶ್ ಬರೆದಿರುವ ಈ ಹಾಡು 2018 ಟಾಪ್ ಲಿಸ್ಟ್ ಗೆ ಸೇರಿಕೊಳ್ಳುವಂತಿದೆ. ರವಿ ಬಸ್ರೂರ್ ಸುಮಧುರ ಕಂಠದಲ್ಲಿ ಈ ಹಾಡು ಹೊರ ಹೊಮ್ಮಿದೆ.
ಎಣ್ಣೆ ನಮ್ದು (ಕನಕ)
ಕನಕ ಚಿತ್ರದ ಈ ಪಕ್ಕ ಲೋಕಲ್ ಹಾಡು ಯುವಕರ ಫೇವರಿಟ್ ಎಂಬಂತಿದೆ. ಈ ಹಾಡಿನ ಕ್ರೆಡಿಟ್ ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಅವರಿಗೆ ಸಲ್ಲಬೇಕು. ಸಾಹಿತ್ಯ,ಸಂಗೀತ ಹಾಗೂ ಗಾಯಕರು ನವೀನ್ ಸಜ್ಜು ಅವರೇ.
ಏನಮ್ಮಿ ಏನಮ್ಮಿ(ಆಯೋಗ್ಯ)
ಇದೊಂದು ಮೆಲೋಡಿ ಹಾಡು. ಮಂಡ್ಯ ಭಾಷೆಯ ಸೊಗಡು ಈ ಹಾಡನ್ನು ಅಲಂಕರಿಸಿದೆ. ವಿಜಯ್ ಪ್ರಕಾಶ್ ಹಾಗೂ ಪಾಲಕ್ ಮಚ್ಚಲ್ ಈ ಹಾಡಿನ ಗಾಯಕರು. ಅದ್ಭುತ ಗಾಯನದಿಂದ ಕೇಳುಗರ ಮೆಚ್ಚುಗೆ ಪಡೆದಿದ್ದಾರೆ. ಅರ್ಜುನ್ ಜನ್ಯ ಈ ಹಾಡಿಗೆ ಸಂಗೀತ ನಿರ್ದೇಶಕರು.
ಚುಟು ಚುಟು(ರ್ಯಾಂಬೋ -2)
ಉತ್ತರ ಕರ್ನಾಟಕ ಶೈಲಿಯ ಈ ಹಾಡಿಗೆ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಈ ವರ್ಷದ ಅರ್ಜುನ್ ಜನ್ಯ ಅವರ ಕೈ ಚಳಕದಲ್ಲಿ ಮೂಡಿ ಬಂದ ಹಿಟ್ ಹಾಡುಗಳಲ್ಲಿ ಇದು ಒಂದು. ಈ ಹಾಡಿಗೆ ರಾಜ್ಯದ ಜನತೆಯಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶಿವು ಬೆರ್ಗಿಯವರದ್ದು ಹಾಡಿಗೆ ಸಾಹಿತ್ಯವಿದೆ.ಶಮಿತಾ ಮಲ್ನಾಡು ಹಾಗೂ ರವೀಂದ್ರ ಸೋರ್ಗಾವಿ ಈ ಹಾಡಿನ ಗಾಯಕರು.
ಟಿಕ್ ಟಿಕ್ ಟಿಕ್ (ದಿ ವಿಲನ್)
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಸೂಪರ್ ಹಿಟ್ ಹಾಡು ಇದು. ಹ್ಯಾಟ್ರಿಕ್ ಹಿರೋ ಶಿವ ರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಕಾಣಿಸಿ ಕೊಂಡ ಚಿತ್ರ ದಿ ವಿಲನ್. ಈ ಚಿತ್ರದ ಎಲ್ಲಾ ಹಾಡುಗಳು ಜನಪ್ರಿಯವಾಗಿವೆ.ಅದರಲ್ಲೂ ಟಿಕ್ ಟಿಕ್ ಹಾಡು ಪ್ರೇಕ್ಷಕರ ಅತ್ಯಂತ ಮೆಚ್ಚುಗೆ ಪಡೆದಿರೋ ಹಾಡು ಎಂದೆನಿಸಿಕೊಂಡಿದೆ. ಕೈಲಾಶ್ ಖೇರ್,ವಿಜಯ್ ಪ್ರಕಾಶ್,ಸಿದ್ಧಾರ್ಥ್ ಬಸ್ರೂರ್ ಹಾಡಿದ್ದು ಹಾಡಿನ ಅಂದವನ್ನು ಇಮ್ಮಡಿಗೊಳಿಸಿದ್ದಾರೆ.
ಹೋದ ವರ್ಷ 2018ರಲ್ಲಿ ಸಾಲು ಸಾಲು ಹಿಟ್ ಹಾಡುಗಳ ಕಂಪು ಎಲ್ಲೆಲ್ಲೂ ಫಸರಿಸಿದೆ. ಪರಭಾಷೆ ಚಿತ್ರಗಳಂತೆ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿದ್ದು ಚಿತ್ರಗಳ ಹಾಡುಗಳು ಕೂಡ ಜನಪ್ರಿಯವಾಗುತ್ತಿವೆ.