Emergency landing by Indigo 6E 997 at Bhubaneswar
Emergency landing by Indigo 6E 997 at Bhubaneswar
January 21, 2019
ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
January 25, 2019
Emergency landing by Indigo 6E 997 at Bhubaneswar
Emergency landing by Indigo 6E 997 at Bhubaneswar
January 21, 2019
ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡುಗ ಡ್ರೋನ್ ಯಂತ್ರ ಸೃಷ್ಟಿಸಿದ ಯುವ ವಿಜ್ಞಾನಿ ಪ್ರತಾಪ್ ರೈತನ ಮಗನೊಬ್ಬನ ಅಂತರಾಷ್ಟ್ರೀಯ ಮಟ್ಟದ ಸಾಧನೆ
January 25, 2019

ಚಳಿಗಾಲದಲ್ಲಿ ಸೌಂದರ್ಯಕ್ಕೆ ಧಕ್ಕೆಯಾಗದಿರಲಿ..

ಚಳಿಗಾಲದಲ್ಲಿ ಸೌಂದರ್ಯಕ್ಕೆ ಧಕ್ಕೆಯಾಗದಿರಲಿ..

Image from post regarding ಚಳಿಗಾಲದಲ್ಲಿ ಸೌಂದರ್ಯಕ್ಕೆ ಧಕ್ಕೆಯಾಗದಿರಲಿ..

ಇದೀಗ ಚಳಿ ಸಮಯ . ಸೌಂದರ್ಯ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುವುದು ಇದೇ ವೇಳೆಯಲ್ಲಿ. ತ್ವಚೆ ಒಡೆದು ಕೊಳ್ಳುವುದು. ತುಟಿಗಳು ಒಣಗಿ ಬಿರುಕು ಕಂಡು ಬರುವುದು. ಕೂದಲು ಒಣಗುವುದು,ಪಾದಗಳ ಹಿಮ್ಮಡಿ ಒಡೆಯುವುದು ಸಾಮಾನ್ಯ. ಇದರಿಂದ ಚರ್ಮದ ಕಾಂತಿಯೇ ಕಳೆದು ಹೋಗುತ್ತದೆ. ಚಳಿಗಾಲದಲ್ಲಿ ಸೌಂದರ್ಯವನ್ನು ಕಾಪಾಡಿ ಕೊಳ್ಳುವುದೇ ಒಂದು ಸವಾಲು ಜತೆಗೆ ಆರೋಗ್ಯ ಕೂಡ. ಎಲ್ಲಾ ವಯೋಮಾನದವರಿಗೂ ಚರ್ಮದ ರಕ್ಷಣೆ ಮತ್ತು ಆರೋಗ್ಯವೂ ಅಗತ್ಯ. ಇವುಗಳ ರಕ್ಷಣೆಗೆ ಇಲ್ಲಿವೆ ಸರಳ ಉಪಾಯಗಳು.

ಬಹು ಮುಖ್ಯವಾಗಿ ಸೌಂದರ್ಯ ಎಂದಾಕ್ಷಣ ಮುಖದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಆದರೆ ಕೈ, ಕಾಲು, ಚರ್ಮ,ಕೂದಲು ಬಗ್ಗೆನೂ ಜಾಗರೂಕರಾಗಿಬೇಕಾಗುತ್ತದೆ. ಚರ್ಮಕ್ಕೆ ಹೊಳಪು ನೀಡಲು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಮನೆ ಮದ್ದು ತುಂಬಾ ಸೂಕ್ತ.

ಮುಖದ ಕಾಳಜಿ

ಮುಖದ ಸೌಂದರ್ಯಕ್ಕೆ ಬಾಳೆಹಣ್ಣಿನ ಮಸಾಜ್ ತುಂಬಾ ಪ್ರಯೋಜನಕಾರಿ. ಎಣ್ಣೆ ಹಾಗೂ ಒಣ ಚರ್ಮ ಎರಡು ತ್ವಚೆ ಹೊಂದಿರುವವರು ಇದನ್ನು ಉಪಯೋಗಿಸಬಹುದು. ಮೊದಲು ನಿಮ್ಮ ಮುಖವನ್ನು ಉಗುರು ಬೆಚ್ಚಗಿರುವ ನೀರಿನಲ್ಲಿ ತೊಳೆದುಕೊಳ್ಳಿ. ನಂತರ ಚೆನ್ನಾಗಿ ಹಿಸುಕಿದ ಬಾಳೆ ಹಣ್ಣನ್ನು ಹಾಲಿನ ಕೆನೆ ಜತೆಗೆ ಮಿಕ್ಸ್ ಮಾಡಿಕೊಳ್ಳಿ. ಮುಖಕ್ಕೆ ಹಚ್ಚುತ್ತಾ ಮಸಾಜ್ ಮಾಡಿ. ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ. ಇದು ನಿಮ್ಮ ಮುಖಕ್ಕೆ ಉತ್ತಮ ಫಲಿತಾಂಶ ನೀಡುತ್ತದೆ. ಕ್ಯಾರೆಟ್, ಆಲೂಗಡ್ಡೆ , ಸೌತೆಕಾಯಿ,ಟೊಮೇಟೋ ರಸವನ್ನು ದಿನಾ ಮನೆಯಲ್ಲಿಯೇ ಕುಳಿತು ಕೊಂಡು ಮುಖಕ್ಕೆ ಲೇಪಿಸುತ್ತಿದ್ದರೆ ತುಂಬಾ ಒಳ್ಳೆಯದು. ಇನ್ನು ಮುಖದಲ್ಲಿ ಅಂಟಿದ್ದ ಧೂಳನ್ನು ಹೋಗಲಾಡಿಸಲು ಟೊಮೇಟೋ ಬಹುಮುಖ್ಯ ಪಾತ್ರ ವಹಿಸುತ್ತದೆ. ಅದರ ರಸವನ್ನು ಮುಖಕ್ಕೆ ಹಚ್ಚಿದ ನಂತರ ನೀರಲ್ಲಿ ತೊಳೆದರೆ ತ್ವಚೆಯ ರಂಧ್ರಗಳು ಸ್ವಚ್ಚ ಗೊಳ್ಳುತ್ತದೆ. ಕಡ್ಲೆ ಹಿಟ್ಟು ಉಪಯೋಗಿಸುವುದರಿಂದಲೂ ಮುಖದ ಕಾಂತಿಗೆ ತುಂಬಾ ಒಳ್ಳೆಯದು. ಆದರೆ ಕೆಲವರ ಚರ್ಮಕ್ಕೆ ಇದು ಹೊಂದಿಕೆಯಾಗುವುದಿಲ್ಲ. ಹೀಗಾಗಿ ಅದರ ಬಳಕೆ ಮಾಡುವ ಮುನ್ನ ಒಂದು ಬಾರಿ ಹಾಕಿ ಪ್ರಯತ್ನಿಸಿ. ಒಂದು ವೇಳೆ ತುರಿಕೆ,ಕಿರಿ ಕಿರಿ ಆಗುತ್ತಿದ್ದರೆ ಕೂಡಲೇ ಮುಖ ತೊಳೆಯಿರಿ. ಮನೆಯಿಂದ ಹೊರ ಹೋಗುವಾಗ ಮುಖಕ್ಕೆ ಹಾಗೂ ಕತ್ತು ಭಾಗಕ್ಕೆ ಮಾಯಿಶ್ಚರೈಸರ್ ಲೇಪಿಸಿಕೊಳ್ಳಿ. ಲೋಳೆ ರಸವನ್ನು ಕೂಡ ಮುಖಕ್ಕೆ ಲೇಪಿಸಿದರೆ ಉತ್ತಮ ಫಲಿತಾಂಶ ನಿಮ್ಮದಾಗುವುದು. ಅರಿಶಿಣ ಕಡ್ಲೆ ಹಿಟ್ಟು ಮಿಕ್ಸ್ ಮಾಡಿ ಹಚ್ಚಿ ಕೊಂಡರೂ ಚರ್ಮಕ್ಕೆ ಒಳ್ಳೆಯದು. ಜತೆಗೆ ನೀರನ್ನು ಹೆಚ್ಚು ಹೆಚ್ಚು ಕುಡಿಯಲು ಮರೆಯದಿರಿ. ಇದರಿಂದ ನೀವು ತ್ವಚೆಗೆ ಬೇಕಾದ ತೇವಾಂಶವನ್ನು ಒದಗಿಸಿದಂತೆ ಆಗುತ್ತದೆ. ಆಹಾರದಲ್ಲಿ ಹೆಚ್ಚು ಪೋಷಕಾಂಶಗಳನ್ನು ಬಳಸಿ. ಋತುಮಾನಕ್ಕೆ ಅನುಗುಣವಾಗಿ ತಾಜಾ ಹಣ್ಣು – ತರಕಾರಿಗಳನ್ನು ಹೆಚ್ಚು ಬಳಸಿ. ಚಳಿಗಾಲದಲ್ಲಿ ಚರ್ಮ ಶುಷ್ಕ ಗೊಳ್ಳುವುದರಿಂದ ಆದಷ್ಟು ಹದ ಬಿಸಿಯಿರುವ ನೀರಲ್ಲೇ ಮುಖ ತೊಳೆದರೆ ಒಳಿತು.

ತುಟಿಗಳ ರಕ್ಷಣೆ

ಚಳಿಗಾಲದಲ್ಲಿ ತುಟಿ ಒಡೆದು ಕೊಳ್ಳುವುದು ಬಹು ದೊಡ್ಡ ಸಮಸ್ಯೆ. ಕೆಲವರಿಗೆ ತುಟಿಯಲ್ಲಿ ಬಿರುಕುಗಳು ಬಂದರೆ ,ಇನ್ನು ಕೆಲವರ ತುಟಿಯಲ್ಲಿ ಸಿಪ್ಪೆ ಎದ್ದು ಬರಬಹುದು. ಇನ್ನೂ ಕೆಲವರಿಗೆ ರಕ್ತವೇ ಕಾಣಿಸಿ ಕೊಳ್ಳುವಷ್ಟು ಗಂಭೀರ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದ ಮುಖದಲ್ಲಿ ಬಿರುಕು ಬಿಟ್ಟ ತುಟಿಗಳು ಎದ್ದು ಕಾಣುತ್ತವೆ. ಇದು ತರುವ ಮುಜುಗರದಿಂದಾಗಿ ಒಣಗಿ ಎದ್ದಿರುವ ಸಿಪ್ಪೆಯನ್ನು ಕಚ್ಚಿ ಕೀಳಲೇ ಬೇಡಿ.ಇದರಿಂದ ಅದರ ಅಂದ ಇನ್ನಷ್ಟು ಕೆಡುತ್ತದೆ. ತುಟಿ ಕಪ್ಪಾಗಾಗಿ ಹೋಗಬಹುದು. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಅಥವಾ ನೀವು ಮನೆಯಲ್ಲೇ ಇದ್ದರೆ ಹಗಲು ಹೊತ್ತಿನಲ್ಲಿ ತುಟಿಗೆ ತುಪ್ಪ/ಬೆಣ್ಣೆ/ತೆಂಗಿನ ಎಣ್ಣೆಯನ್ನು ಸವರುತ್ತಿದ್ದರೆ ತುಂಬಾ ಒಳ್ಳೆಯದು.ವಾರಕ್ಕೊಮ್ಮೆಯಾದರೂ ಬೆಣ್ಣೆ ಹಚ್ಚಿ ಮಸಾಜ್ ಮಾಡುತ್ತಲೇ ಇರಿ. ಇದರಿಂದ ಸಹಜವಾಗಿಯೇ ತುಟಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ತುಟಿಗಳು ಒಡೆದು ಹೋಗುವ ಪರಿಸ್ಥಿತಿಯೇ ಬರುವುದಿಲ್ಲ. ಇನ್ನು ತೆಂಗಿನೆಣ್ಣೆ ಕೂಡ ತುಟಿ ಒಡೆದು ಕೊಳ್ಳುವುದಕ್ಕೆ ಅತ್ಯಂತ ಪರಿಣಾಮಕಾರಿ ಔಷಧಿ. ನಮ್ಮ ಹಿರಿಯರು ಕೂಡ ಚಳಿಗಾಲದಲ್ಲಿ ತುಟಿ,ಕೈ ಕಾಲುಗಳಿಗೆ ಈ ಎಣ್ಣೆ ಹಾಕಿ ಮಸಾಜ್ ಮಾಡುತ್ತಿದ್ದರು. ಇದರಿಂದ ಕೈ ಕಾಲುಗಳ ಚರ್ಮ ಬಿರುಕು ಕಾಣಿಸಿಕೊಳ್ಳುವುದರಿಂದ ಪಾರಾಗುತ್ತಿದ್ದರು. ಇನ್ನು ತುಟಿಗೆ ಹಸಿಯಾದ ತೆಂಗಿನ ತುರಿಯನ್ನು ಹಿಂಡಿದಾಗ ಸಿಗುವ ತೆಂಗಿನ ಹಾಲಿನ 2-3 ಬಿಂದುವನ್ನು ಹಚ್ಚಿ ಕೊಂಡರೆ ಅತ್ಯಂತ ಸುಂದರವಾದ ತುಟಿ ನಿಮ್ಮದಾಗುತ್ತದೆ.

ಪಾದಗಳ ರಕ್ಷಣೆ

ಈಗಿನ ಒತ್ತಡದ ಜೀವನದಲ್ಲಿ ಹೆಚ್ಚಿನವರಿಗೆ ಸೌಂದರ್ಯದ ಕಡೆಗೆ ಗಮನ ಹರಿಸಲು ಸಮಯವಿಲ್ಲ. ಅದರಲ್ಲೂ ಪಾದಗಳನ್ನು ಅಸಡ್ಡೆ ಮಾಡುವವರೇ ಹೆಚ್ಚು. ಅದನ್ನು ಯಾರೂ ಗಮನಿಸುತ್ತಾರೆ. ಮುಖವನ್ನು ಮಾತ್ರ ಚೆನ್ನಾಗಿ ಇಟ್ಟು ಕೊಂಡರೆ ಸಾಕು ಎಂದು ಮುಖಕ್ಕೆ ಮಾತ್ರ ಪ್ರಾಮುಖ್ಯತೆ ನೀಡುತ್ತಾರೆ. ನಿಮ್ಮ ಈ ಕಲ್ಪನೆ ಸರಿಯಲ್ಲ. ಸೌಂದರ್ಯಕ್ಕೆ ಪಾದಗಳು ಕೂಡ ಕಪ್ಪು ಚುಕ್ಕಿಯಾಗಿ ಪರಿಣಮಿಸಬಹುದು. ಚಳಿಗಾಲದಲ್ಲಿ ಹೆಚ್ಚಿನವರಿಗೆ ಪಾದಗಳ ಹಿಮ್ಮಡಿ ಬಿರುಕು ಬಿಡುತ್ತದೆ. ಅಷ್ಟೇ ಅಲ್ಲ ಅವುಗಳಿಂದಾಗುವ ಉರಿ ಅನುಭವ ಕಿರಿ ಕಿರಿ ಉಂಟು ಮಾಡುವುದಲ್ಲದೇ ಸಹಿಸಲು ಅಸಾಧ್ಯವೆಂದೆನಿಸಿ ಬಿಡುತ್ತದೆ. ಸಮಯವಿಲ್ಲವೆನ್ನುವ ಸಣ್ಣ ನೆಪ ನಿಮಗೆ ಇನ್ನೂ ಹೆಚ್ಚಿನ ನೋವನ್ನುಂಟು ಮಾಡಬಹುದು. ಅದಕ್ಕಾಗಿ ಕೂಡಲೇ ಚಿಕಿತ್ಸೆ ಶುರು ಮಾಡುವುದು ಒಳ್ಳೆಯದು. ಪಾದಗಳ ಕಾಂತಿ ಹೆಚ್ಚಿಸಲು ನಿಂಬೆ ಹಣ್ಣಿನ ರಸ ಸರಳ ಮದ್ದು. ಅದರಲ್ಲಿರುವ ಆಮ್ಲೀಯ ಗುಣ ಹಾಗೂ ವಿಟಮಿನ್ ಸಿ ಉಗುರು ಹಾಗೂ ಪಾದಗಳ ಆರೈಕೆಗೆ ಸಹಕರಿಸುತ್ತದೆ. ಬಿಸಿ ನೀರಿಗೆ ನಿಂಬು ರಸವನ್ನು ಬೆರೆಸಿ ಪಾದವನ್ನು ಸ್ವಲ್ಪ ಸಮಯಗಳವರೆಗೆ ಇಟ್ಟು ಕೊಳ್ಳ ಬೇಕು ಇದರಿಂದ ನಿಮ್ಮ ಪಾದಕ್ಕೆ ರಿಲೀಫ್ ಸಿಕ್ಕ ಅನುಭವವಾಗುವುದು. ಸ್ವಲ್ಪ ದಿನಗಳ ಕಾಲ ಇದನ್ನು ಮುಂದುವರಿಸಿ ಕೊಂಡು ಹೋಗಿ. ಕ್ರಮೇಣ ನಿಮ್ಮ ಪಾದದಲ್ಲಿರುವ ಬಿರುಕು ಸಮಸ್ಯೆ ದೂರವಾಗುತ್ತದೆ. ಇನ್ನು ನೀವು ತಡೆದು ಕೊಳ್ಳುವಷ್ಟು ಬಿಸಿ ನೀರಿಗೆ ಅರಿಶಿನ ಉಪ್ಪು ಬೆರೆಸಿ ಕಾಲನ್ನು ಅದರಲ್ಲಿ ಇರಿಸಿ ಇದರಿಂದಲೂ ನೀವು ಉತ್ತಮ ರಿಸಲ್ಟ್ ಕಾಣುತ್ತೀರಿ. ಯಾವುದಾದರೂ ಕ್ರೀಂ ಹಚ್ಚಿದರೂ ಸ್ವಲ್ಪ ಸಮಯ ಮಸಾಜ್ ಮಾಡಿ. ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಪಾದಗಳು ಮೃದು ಆಗುತ್ತವೆ. ನಿಮಗೆ ಆರಾಮ ಎಂದೆನಿಸುವ ಚಪ್ಪಲಿಗಳ ಬಳಕೆ ಮಾಡಿ. ಪಾದಗಳಿಗೆ ಸಂಬಂಧ ಪಡುವ ವ್ಯಾಯಾಮಗಳನ್ನು ಬಿಡುವಿದ್ದಾಗ ಮಾಡಿಕೊಳ್ಳಿ.

ಕೂದಲ ಆರೈಕೆ

ಚಳಿ ಸಮಯದಲ್ಲಿ ಕೂದಲ ಬೇರುಗಳನ್ನು ನಿರ್ಲಕ್ಷ್ಯಿಸಬಾರದು. ಈ ವೇಳೆ ತಲೆ ಬುರುಡೆಯಲ್ಲಿ ತುರಿಕೆಯ ಅನುಭವವಾಗುವುದು ಸಹಜ. ಇನ್ನೂ ಕೆಲವರ ಕೂದಲು ಉದುರಲು ಶುರುವಾಗುತ್ತದೆ. ಇದಕ್ಕಾಗಿ ಎಣ್ಣೆ ಮಸಾಜ್ ಮಾಡಿಕೊಳ್ಳ ಬೇಕು. ತಲೆಗೆ ಹಗುರವಾದ ಮಸಾಜ್ ತಲೆ ಹೊಟ್ಟು ನಿವಾರಣೆಗೂ ಅತ್ಯುತ್ತಮ ಮನೆ ಔಷಧಿ. ಎಣ್ಣೆ ತಲೆಯಲ್ಲಿ ಉಳಿಯದ ಹಾಗೆ ತೊಳೆದು ಕೊಂಡರೆ ಫಂಗಸ್ ಅಥವಾ ಸೋಂಕಿನಿಂದಾಗುವ ತೊಂದರೆಯನ್ನು ಹೋಗಲಾಡಿಸಬಹುದು.

ಆರೋಗ್ಯವೇ ಭಾಗ್ಯ ಎಂಬಂತೆ ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿದೆ. ನಾವು ಸ್ವಲ್ಪ ಯಾಮಾರಿದರೂ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ಜ್ವರ ,ಶೀತ ಕಾಣಿಸಿ ಕೊಳ್ಳುವುದಿದೆ. ಅದಕ್ಕಾಗಿ ಕಾಲಕ್ಕೆ ಅನುಗುಣವಾಗುವ ಬಟ್ಟೆಗಳನ್ನು ಧರಿಸಿ. ಕಿವಿಗೆ ವಿಪರೀತ ಶೀತ ಗಾಳಿ ಹೋಗದಂತೆ ಜಾಗೃತವಹಿಸಿ. ಆದಷ್ಟು ಬಿಸಿ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಬೆಚ್ಚಗಿರುವ ಆಹಾರ ಪದಾರ್ಥಗಳನ್ನು ಸೇವಿಸಿ. ಹೀಗೆ ಕೆಲವು ಆರೋಗ್ಯ ಟಿಪ್ಸ್ ಗಳನ್ನು ಅನುಸರಿಸಿಕೊಂಡು ಬಂದರೆ ಚಳಿ ಇರಲಿ , ಮಳೆ ಇರಲಿ ನೀವಂತು ಆಕರ್ಷಕವಾಗಿ ಕಾಣಿಸಿಕೊಳ್ಳ ಬಲ್ಲಿರಿ.