ಎಕ್ಸ್ ಕ್ಲೂಸಿವ್ ಸಂದರ್ಶನಲ್ಲಿ ವಿಜಯ ಕುಮಾರಿ
ಎಕ್ಸ್ ಕ್ಲೂಸಿವ್ ಸಂದರ್ಶನಲ್ಲಿ ವಿಜಯ ಕುಮಾರಿ
March 12, 2019
ಹೊಸ ಫ್ಯಾಶನ್ ಗೆ ತೆರೆದುಕೊಳ್ಳಿ
ಹೊಸ ಫ್ಯಾಶನ್ ಗೆ ತೆರೆದುಕೊಳ್ಳಿ
March 16, 2019
ಎಕ್ಸ್ ಕ್ಲೂಸಿವ್ ಸಂದರ್ಶನಲ್ಲಿ ವಿಜಯ ಕುಮಾರಿ
ಎಕ್ಸ್ ಕ್ಲೂಸಿವ್ ಸಂದರ್ಶನಲ್ಲಿ ವಿಜಯ ಕುಮಾರಿ
March 12, 2019
ಹೊಸ ಫ್ಯಾಶನ್ ಗೆ ತೆರೆದುಕೊಳ್ಳಿ
ಹೊಸ ಫ್ಯಾಶನ್ ಗೆ ತೆರೆದುಕೊಳ್ಳಿ
March 16, 2019

ಕಬಡ್ಡಿ ರಾಣಿ ಮಮತಾ ಪೂಜಾರಿ ಸಂದರ್ಶನ

ಕಬಡ್ಡಿ ರಾಣಿ ಮಮತಾ ಪೂಜಾರಿ ಸಂದರ್ಶನ

Image from post regarding ಕಬಡ್ಡಿ ರಾಣಿ ಮಮತಾ ಪೂಜಾರಿ ಸಂದರ್ಶನ

ಹಳ್ಳಿ ಹುಡುಗಿ ಕಬಡ್ಡಿ ಗೆದ್ದ ರೋಚಕ ಕಥೆ
ಕಬಡ್ಡಿ ರಾಣಿ ಮಮತಾ ಪೂಜಾರಿ ಸಂದರ್ಶನ
ರೀನಾ ಡಿಸೋಜಾ ಶೋದಲ್ಲಿ ಅರ್ಜುನ ಪ್ರಶಸ್ತಿ ವಿಜೇತೆ

ಕಬಡ್ಡಿ ರಾಣಿಯೆಂದೇ ಹೆಸರುವಾಸಿಯಾಗಿರುವ ಮಮತಾ ಪೂಜಾರಿ ಅವರು ಕಡು ಬಡತನದಲ್ಲಿ ಬೆಳೆದ ಹುಡುಗಿ. ದೇಶಕ್ಕೆ ಹೆಮ್ಮೆ ತಂದು ಕೊಟ್ಟ ಕಬಡ್ಡಿ ತಾರೆ. ಕ್ರಿಕೆಟ್,ಕಬಡ್ಡಿ ಕೇವಲ ಪುರುಷರು ಆಡುವ ಕ್ರೀಡೆಯೆನ್ನುತ್ತಿದ್ದ ಆ ಸಮಯದಲ್ಲಿಯೂ, ಕಬಡ್ಡಿ ಕಡೆಗೆ ಒಲವು ತೋರಿಸಿ ಇಡೀ ವಿಶ್ವವನ್ನೇ ಗೆದ್ದ ಧೀರೆ. ಹೌದು, ಈ ವಾರ ವಿಶ್ವಕಪ್ ಕಬಡ್ಡಿ ಗೆದ್ದ ಭಾರತ ತಂಡದ ನೆಚ್ಚಿನ ನಾಯಕಿ ಮಮತಾ ಪೂಜಾರಿಯವರು ದಿ ರೀನಾ ಡಿಸೋಜ ಶೋ ದಲ್ಲಿ ಮಾತನಾಡಿದ್ದಾರೆ. ಖ್ಯಾತ ಕ್ರೀಡಾ ನಿರೂಪಕಿ ರೀನಾ ಡಿಸೋಜ ಅವರು ಮಮತಾ ಅವರನ್ನು ಸಂದರ್ಶಿಸಿದರು. ಮಮತಾ ಅವರು ಕಬಡ್ಡಿಯಲ್ಲಿ ಸಾಧಿಸಿದ ಅನುಭವಗಳ ಬುತ್ತಿಯನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಅದರ ಸಾರಾಂಶ ಇಲ್ಲಿದೆ.

ಅದೃಷ್ಟ ಬದಲಿಸಿದ ಕಬಡ್ಡಿ :

ಅರ್ಜುನ ಪ್ರಶಸ್ತಿ ವಿಜೇತೆ ಮಮತಾ ಪೂಜಾರಿ ಅವರು ಹುಟ್ಟಿದ್ದು ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ. ಬಾಲ್ಯದಲ್ಲೇ ಕ್ರೀಡೆ ಅಂದರೆ ಇವರಿಗೆ ಅಪಾರ ಆಸಕ್ತಿ. ಗ್ರಾಮೀಣ ಪ್ರತಿಭೆಯಾದರೂ ಕೊಂಚವೂ ಧೈರ್ಯಗೆಡದೇ ಮುನ್ನಡೆದರು. ಗುರಿ ತಲುಪುವವರೆಗೂ ಸಾಧಿಸಿ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಫಸರಿಸಿದರು. ಇವರ ಸಾಧನೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆ .ಮನಸ್ಸು ಮಾಡಿದರೆ ಹೆಣ್ಣು ಮಕ್ಕಳು ಕೂಡ ಏನನ್ನೂ ಸಾಧಿಸಬಲ್ಲರು ಎಂಬುದಕ್ಕೆ ಇವರೇ ಸಾಕ್ಷಿ. ವಾಲಿಬಾಲ್ ಆಟಗಾರ್ತಿಯಾಗಿದ್ದ ಮಮತಾ ಆಸಕ್ತಿ ಇಲ್ಲದಿದ್ದರೂ ಹಿರಿಯರ ಸಲಹೆಯಂತೆ ಕಬಡ್ಡಿ ಸೇರಿದರು. ಊರಿನ ಜನ ಕಬಡ್ಡಿ ಮೇಲೆ ಒಲವು ತೋರಿಸದಿದ್ದರೂ ಮಮತಾ ಆ ಬಗ್ಗೆ ತಲೆ ಕೆಡಿಸಿ ಕೊಳ್ಳಲಿಲ್ಲ. ತಾನೂ ಆಯಿತು , ತನ್ನ ಕ್ರೀಡೆಯೂ ಆಯಿತು ಎಂದು ಕಬಡ್ಡಿಯಲ್ಲಿ ಮುಂದುವರಿದರು. ಸಾಧನಾ ಪಥದಲ್ಲಿ ಏಳು ಬೀಳುಗಳನ್ನು ಕಂಡರೂ ಅವೆರಡನ್ನೂ ಸಮಾನವಾಗಿ ಸ್ವೀಕರಿಸುತ್ತಾ,ಕಬಡ್ಡಿಯಲ್ಲಿ ಮುಂದೆ ಬಂದರು. ಹೀಗೆ ಆರಂಭದಲ್ಲಿ ಮಮತಾ ಅವರಿಗೆ ಆರ್ಥಿಕ ಸಂಕಷ್ಟಗಳು ಎದುರಾಗಿದ್ದರೂ ಕಬಡ್ಡಿ ಅವರ ಅದೃಷ್ಟವನ್ನೇ ಬದಲಾಯಿಸಿತು. ಸಹಸ್ರಾರು ಕ್ರೀಡಾಸಕ್ತರ ಮನಸ್ಸು ಗೆದ್ದರು.

ನಮ್ಮೂರಿನ ಜನತೆ ನನಗಾಗಿ ಕಾಯುತ್ತಿದ್ದರು:

ಮಮತಾ ಅವರು 2010ರಲ್ಲಿ ಚೀನಾ ದೇಶದ ‘ಗುವಾಂಗ್ ಜೌ’ನಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕಬಡ್ಡಿ ತಂಡವನ್ನು ಪ್ರತಿನಿಧಿಸಿ ಚಿನ್ನ ಗೆದ್ದಿದ್ದರು. ಇದು ಅವರ ಬದುಕಿಗೆ ಹೊಸ ತಿರುವನ್ನು ತಂದು ಕೊಟ್ಟಿತು. 2002ರಲ್ಲಿ ಕಬಡ್ಡಿ ಆಟವನ್ನು ಆರಂಭಿಸಿದ್ದ ಮಮತಾ,2003ರಲ್ಲಿ ರಾಜ್ಯಮಟ್ಟದಲ್ಲಿ , 2004-05ರಲ್ಲಿ ರಾಷ್ಟ್ರ ಮಟ್ಟದಲ್ಲಿ, ಹಾಗೂ 2006ರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಪಡೆದರು. ಈ ಕುರಿತು ಮಾತನಾಡಿದ ಮಮತಾ ಅವರು `ಅಂತರಾಷ್ಟೀಯ ಮಟ್ಟದಲ್ಲಿ ಕಬಡ್ಡಿ ಆಡಿದ ಸಂದರ್ಭವನ್ನು ನೆನೆಸಿಕೊಂಡರೆ ಇವಾಗಲೂ ಮೈ ರೋಮಾಂಚನವಾಗುತ್ತದೆ. ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಆಡುತ್ತಿದ್ದಾಗ,ಪದಕ ಗೆದ್ದಾಗ ನನ್ನ ತಂದೆ- ತಾಯಿ ಸಂತೋಷದಿಂದ ಮನೆಗೆ ಬರಮಾಡಿಕೊಳ್ಳುತ್ತಿದ್ದರು. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಬಂದಾಗ ಇಡೀ ಊರಿನ ಜನತೆ ನನಗಾಗಿ ಕಾಯುತ್ತಿದ್ದರು. ಅದನ್ನು ನೋಡಿ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ . ನಮ್ಮೂರಿನ ಜನತೆಯ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದರು.

ಮದುವೆ ಬಳಿಕವೂ ಪ್ರೋತ್ಸಾಹ ಸಿಕ್ಕಿತು

ಹೆಚ್ಚಿನವರಿಗೊಂದು ತಪ್ಪು ಕಲ್ಪನೆಯಿದೆ. ಮದುವೆ ಆದ ಮೇಲೆ ಸಾಧನೆಗೆ ಅಡ್ಡಿಯಾಗುತ್ತದೆ ಎಂದು. ಆದರೆ ಮಮತಾ ಪೂಜಾರಿ ಅವರಿಗೆ ಮದುವೆ ನಂತರವೂ ಸಂಪೂರ್ಣ ಬೆಂಬಲ ಸಿಕ್ಕಿತು. `ನನಗೆ ಅಣ್ಣ ಹಾಗೂ ತಂಗಿಗೆ ಮದುವೆಯಾದ ಬಳಿಕವೇ ಮದುವೆಯಾಗಲು ಇಷ್ಟವಿತ್ತು. ಅದರೆ ನನ್ನ ತಂದೆ ತಾಯಿ ಇದನ್ನು ಒಪ್ಪಲಿಲಲ್ಲ. ನಾನು 2013ರಲ್ಲಿ ಅಭಿಷೇಕ್ ಅವರನ್ನು ಮದುವೆಯಾದೆ. ಜನವರಿಯಲ್ಲಿ ನನ್ನ ಮದುವೆಯಾಗಿತ್ತು. ಫೆಬ್ರವರಿಯಲ್ಲಿ ನನಗೆ ಕ್ಯಾಂಪ್ ಇತ್ತು. ಈ ಬಗ್ಗೆ ಪತಿ ಜತೆ ಹೇಳಿದೆ. ಆಗ ಅವರ ಪ್ರತಿಕ್ರಿಯೆ ನೋಡಿ ತುಂಬಾ ಸಂತೋಷವಾಯಿತು. ನನಗೆ ನಂಬುವುದಕ್ಕೆ ಅಸಾಧ್ಯವಾಯಿತು. ನಿನ್ನ ಸಾಧನೆಯನ್ನು ನಿಲ್ಲಿಸಲು ನನಗ್ಯಾವ ಹಕ್ಕು ಇಲ್ಲ ಎಂದರು. ನನ್ನ ಅತ್ತೆ ಕೂಡ ನನಗೆ ಬೆಂಬಲ ನೀಡುತ್ತಿದ್ದರು. ನನ್ನ ಬಗ್ಗೆ ಅವರಿಗೂ ಹೆಮ್ಮೆಯಿದೆ. ನಾನು ಹೇಳುವುದಿಷ್ಟೇ ಮದುವೆಯ ನಂತರ ಯಾವ ವ್ಯತ್ಯಾಸವು ಇರುವುದಿಲ್ಲ. ಮನೆಯವರ ಬೆಂಬಲ ಸಿಕ್ಕರೆ ಮುಂದೆ ಬನ್ನಿ . ಮೂರು ಮಕ್ಕಳಾದ ಮೇಲೆ ಮೇರಿ ಕೋಮ್ ದೇಶವನ್ನು ಪ್ರತಿನಿಧಿಸಿ ಚಿನ್ನ ಗೆದ್ದಿದ್ದಾರೆ. ಗುರಿ ಮುಖ್ಯ. ನಿಮ್ಮಲ್ಲಿ ಆತ್ಮ ವಿಶ್ವಾಸವಿದ್ದರೆ ಏನನ್ನು ಬೇಕಾದರೂ ಮಾಡಬಹುದು. ಹೀಗಾಗಿ ಮದುವೆ ನಂತರ ಸಾಧನೆಗೆ ತೊಡಕಾಗುತ್ತದೆ ಎನ್ನುವ ಭ್ರಮೆಯನ್ನು ಬಿಟ್ಟು ಹಾಕಿ ಎಂದರು.

ಕಬಡ್ಡಿಯಲ್ಲಿ ಉತ್ತಮ ಭವಿಷ್ಯವಿದೆ

ಮಮತಾ ಅವರಿಗೆ ವಾಲಿಬಾಲ್ ಫೇವರಿಟ್ ಗೇಮ್ ಆಗಿತ್ತು. ಕಬಡ್ಡಿ ಆಡಲು ಶುರು ಮಾಡಿದ್ದೇ ಕಾಲೇಜಿಗೆ ಹೋಗುತ್ತಿದ್ದಾಗ. ಅವರು ತುಂಬಾ ಎತ್ತರ ಇದ್ದುದರಿಂದ ಕಬಡ್ಡಿಯಲ್ಲಿ ಉತ್ತಮ ಪಾಯಿಂಟ್ಸ್ ಸಿಗುತ್ತಿತ್ತು. ಇದಾದ ಬಳಿಕ ರಾಜ್ಯಮಟ್ಟದಲ್ಲಿ ಆಡಲು ಆರಂಭಿಸಿದರು. ಎಲ್ಲಾ ಕ್ರೀಡೆಯನ್ನು ಆಡುತ್ತಾ ಆಲ್ ರೌಂಡರ್ ಎಂದೆನಿಸಿಕೊಂಡರು. ಈ ಸಂದರ್ಭದಲ್ಲಿ ಅವರಿಗೆ ಯಾವುದೇ ಕೋಚ್ ಗಳ ತರಬೇತಿ ಅಥವಾ ಕ್ಲಬ್ ಗಳು ಇರಲಿಲ್ಲ. ಕಾಲೇಜ್ ನಲ್ಲಿ ಕಬಡ್ಡಿ ಆಸಕ್ತಿ ಹೊಂದಿದವರಿಗೆ ಕಲಿಸಲೆಂದು ಸರ್ ಒಬ್ಬರು ಬರುತ್ತಿದ್ದರು. `2003ರಲ್ಲಿ ರಾಜ್ಯಮಟ್ಟದಲ್ಲಿ ಆಡಲು ಆಯ್ಕೆಯಾದೆ. ಪೇಪರ್ ನ ಕೊನೆ ಪುಟದಲ್ಲಿ ನನ್ನ ಪಾಸ್ ಪೋರ್ಟ್ ಭಾವ ಚಿತ್ರವೊಂದು ಬಂದಿತ್ತು. ಅದನ್ನು ನೋಡಿ ನನಗೆ ಸಾಧನೆ ಮಾಡಿದಷ್ಟೇ ಆನಂದವಾಯಿತು. ಈ ವೇಳೆ ನಮ್ಮ ಕೋಚ್ ಮನೆಗೆ ಬಂದು ತಂದೆ ತಾಯಿ ಜತೆ ಮಾತನಾಡಿದರು. ಮಮತಾಗೆ ಕಬಡ್ಡಿಯಲ್ಲಿ ಉತ್ತಮ ಭವಿಷ್ಯವಿದೆ ಎಂದರು. ಅವರ ಮಾತು ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತೆ ಮಾಡಿತು.” ಎಂದರು.

ಕಬಡ್ಡಿಯೂ ಜನಪ್ರಿಯ ಕ್ರೀಡೆ

ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇದೀಗ ಜನಪ್ರಿಯ ಕ್ರೀಡೆಯಾಗಿ ಬೆಳೆದಿದೆ. ಕ್ರಿಕೆಟ್ ನಂತರ ಜನಪ್ರಿಯ ಕ್ರೀಡೆಗಳಲ್ಲಿ ಕಬಡ್ಡಿ ಕೂಡ ಒಂದು. ಅದೊಂದು ಕಾಲದಲ್ಲಿ ಕ್ರಿಕೆಟನ್ನು ಮಾತ್ರ ಇಷ್ಟ ಪಡುತ್ತಿದ್ದ ಜನರೀಗ ಕಬಡ್ಡಿಯನ್ನು ಮೆಚ್ಚಿಕೊಳ್ಳಲು ಆರಂಭಿಸಿದ್ದಾರೆ. ಪ್ರೋ ಕಬಡ್ಡಿ ಬಂದ ಮೇಲೆ ಕಬಡ್ಡಿ ಕೂಡ ಮನರಂಜನೆಯ ಕ್ರೀಡೆಯೆಂದೆನಿಸಿಕೊಂಡಿದೆ ಎಂದು ಮಮತಾ ಪೂಜಾರಿಯವರು ಕಬಡ್ಡಿ ಕ್ರೀಡೆ ಬಗ್ಗೆ ವಿವರಿಸಿದರು.

ಸೆಗ್ ಮೆಂಟ್ಸ್

ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಗೇಮಿಂಗ್ ಸೆಗ್ ಮೆಂಟ್ ವಿಭಿನ್ನವಾಗಿದ್ದು, ವೀಕ್ಷಕರನ್ನು ಆಕರ್ಷಿಸುವಂತೆ ಮಾಡುತ್ತದೆ. ಆಕರ್ಷ್ ಅವರು ಈ ಸೆಗ್ ಮೆಂಟ್ ನ್ನು ನಡೆಸಿ ಕೊಟ್ಟರು. ಕ್ರೀಡೆ ಕುರಿತಂತೆ ಮಮತಾ ಅವರ ಮನಸ್ಸಿನಲ್ಲಿ ಯಾವ ಶಬ್ಧ ಇದೆ ಎಂಬುದನ್ನು ಅರ್ಥ ಮಾಡಿಕೊಂಡು ಆಡುವ ಆಟ ಇದಾಗಿತ್ತು.ಮಮತಾ ಅವರ ಮನಸ್ಸಿನಲ್ಲಿ ಅಡಗಿದ್ದ ಗೇಮ್ ಶಬ್ಧವನ್ನು ಆಕರ್ಷ್ ಅವರು ಪತ್ತೆ ಹಚ್ಚಿದ್ದು ತುಂಬಾ ಮಜಾವನ್ನುಂಟು ಮಾಡಿತ್ತು. ಎರಡನೇ ಗೇಮ್ ನಲ್ಲಿಯೂ ಮಮತಾ ಅವರು ಸಕ್ರೀಯರಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಮತಾ ಅವರು ಶರ್ಟ್ ಹಾಗೂ ಬ್ಯಾಟ್ ಗೆ ಹಸ್ತಾಕ್ಷರ ನೀಡಿದರು. ಫೂಡ್ ಟೇಸ್ಟಿಂಗ್ ಸೆಗ್ ಮೆಂಟ್ ನಲ್ಲಿ ಮಮತಾ ಅವರು ಖಾದ್ಯಗಳ ಸವಿಯನ್ನು ಸವಿದರು.ಎಜುಕೇಟಿವ್ ಸೆಗ್ ಮೆಂಟ್ ನಲ್ಲಿ ಮಮತಾ ಅವರು ಕಬಡ್ಡಿ ಕುರಿತಂತೆ ಸಲಹೆ ಸೂಚನೆಗಳನ್ನು ನೀಡಿದರು.ಇನ್ನು ಮುಂದೆ ನಿಮ್ಮ ವೃತ್ತಿ ಜೀವನದಲ್ಲಿ ಕಬಡ್ಡಿಯನ್ನು ಯಾವುದೇ ಭಯವಿಲ್ಲದೇ ಆರಿಸಿಕೊಳ್ಳಬಹುದು. ಇದಕ್ಕೆ ಸಾಕ್ಷಿ ಪ್ರೋ ಕಬಡ್ಡಿಯ ಜನಪ್ರಿಯತೆ. ಕಬಡ್ಡಿ ಆಯ್ಕೆ ಮಾಡಿಕೊಂಡರೂ ನಿಮ್ಮ ಲೈಫ್ ಸೆಟ್ಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಶಿಕ್ಷಣದೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಿ,ನಿಮ್ಮ ಕ್ರೀಡೆಯ ಪ್ರದರ್ಶನ ಉತ್ತಮವಾಗಿದ್ದರೆ ಅವಕಾಶಗಳು ಖಂಡಿತವಾಗಿಯೂ ನಿಮ್ಮನ್ನರಸಿಕೊಂಡು ಬರುತ್ತವೆ ಎಂದರು. ರಾಪಿಡ್ ಪಾಯರ್ ನಲ್ಲಿ ನಿರೂಪಕಿ ರೀನಾ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಫಟ್ ಫಟಾ ಎಂದು ಉತ್ತರಿಸಿದರು.ಕಾರ್ಯಕ್ರಮದ ಕೊನೆಹಂತದಲ್ಲಿ ಲೀವ್ ಆಕ್ಟೀವ್ ಅವರ ಕಡೆಯಿಂದ ಗಿಫ್ಟ್ ಹ್ಯಾಂಪರ್ ನೀಡಲಾಯಿತು.

– ದಯಾಮಣಿ ಹೇಮಂತ್