– 1 ಗಂಟೆಯೊಳಗೆ 2 ಪದಕದ ವಿಜಯ !
– ಮಂಡ್ಯ ಹುಡುಗಿ ಚಿನ್ನ ಗೆದ್ದ ಕಂಪ್ಲೀಟ್ ಕಥೆ
– ಎಕ್ಸ್ ಕ್ಲೂಸಿವ್ ಸಂದರ್ಶನಲ್ಲಿ ವಿಜಯ ಕುಮಾರಿ
ಪ್ರತಿಷ್ಟಿತ ಕಾಮನ್ ವೆಲ್ತ್ ಕೂಟಗಳಲ್ಲಿ ಪಾಲ್ಗೊಂಡು ದೇಶಕ್ಕಾಗಿ ಪದಕ ಗೆಲ್ಲುವುದು ಪ್ರತಿಯೊಬ್ಬ ಅಥ್ಲೀಟ್ ಜೀವನದ ಆದಮ್ಯ ಕನಸು. ಕಠಿಣ ಗುರಿ ಸಾಧನೆಗಾಗಿ ಅಥ್ಲೀಟ್ ಗಳು ಟ್ರ್ಯಾಕ್ ನಲ್ಲಿ ಪಡುವ ಕಷ್ಟ ಅಷ್ಟಿಷ್ಟಲ್ಲ. ಅವಮಾನ,ನಿಂದನೆ ಸೋಲು ಗೆಲುವುಗಳನ್ನು ಅನುಭವಿಸಿಕೊಂಡೇ ಸಾಧನೆಯ ಮೆಟ್ಟಿಲನ್ನೇರಿಕೊಂಡು ಬರುತ್ತಾರೆ. ಒಂದೊಂದು ಬಾರಿ ಇನ್ನೇನು ಜೀವನಲ್ಲಿ ಯಶಸ್ಸಿನ ತಿರುವು ಸಿಕ್ಕಿತು ಎನ್ನುವಷ್ಟರಲ್ಲೇ ಮತ್ತೆ ಸಂಗಿಗ್ಧ ಪರಿಸ್ಥಿತಿಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ಎದುರಾಗಿ ಬಿಡುತ್ತದೆ. ಇಂತಹುದೇ ಸಂಗಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿ ಒದ್ದಾಡಿದರೂ ಗೆದ್ದೇ ಗೆಲ್ತೀನಿ ಎಂಬ ಹಠದೊಂದಿಗೆ ಹೋರಾಟ ಮಾಡುತ್ತಿದ್ದಾರೆ ಅಥ್ಲೆಟಿಕ್ಸ್ ವಿಜಯಕುಮಾರಿಯವರು. ವಯಸ್ಸು 23. ಕರ್ನಾಟಕದ ಮಂಡ್ಯ ಮೂಲದವರು. ಬಡತನದ ಹಿನ್ನಲೆಯುಳ್ಳ ರೈತ ಕುಟುಂಬದ ಹುಡುಗಿ. ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ, ಬೆಳ್ಳಿ ಪದಕ ಗೆಲ್ಲುವುದರ ಮೂಲಕ ದೇಶವೇ ಹೆಮ್ಮೆ ಪಡುವಂತೆ ಸಾಧನೆ ಮಾಡಿದ್ದಾರೆ. ಬನ್ನಿ ಈ ವಾರ ವಿಜಯ ಕುಮಾರಿಯವರು ದಿ ರೀನಾ ಡಿಸೋಜಾ ಶೋದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಖ್ಯಾತ ಕ್ರೀಡಾ ನಿರೂಪಕಿ ರೀನಾ ಡಿಸೋಜಾ ಅವರು ವಿಜಯಕುಮಾರಿ ಅವರನ್ನು ಸಂದರ್ಶಿಸಿದರು.
ಅದೊಂದು ಒಳ್ಳೆಯ ಅನುಭವ
ಕರ್ನಾಟಕದ ಅಥ್ಲೀಟ್ ವಿಜಯ ಕುಮಾರಿ ಅವರು , 22ನೇ ಫೆಡರೇಶನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಅವಳಿ ಪದಕಕ್ಕೆ ಭಾಜನರಾಗಿದ್ದರು. ಮಹಿಳೆಯರ 400 ಮೀಟರ್ ನಲ್ಲಿ ಬೆಳ್ಳಿ ಹಾಗೂ 800 ಮೀಟರ್ ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ವಿಜಯ ಕುಮಾರಿ ಎಲ್ಲರ ಗಮನ ಸೆಳೆದಿದ್ದರು. ಈ ಸಂದರ್ಭ ಕರ್ನಾಟಕದ ಮತ್ತೋರ್ವ ಅಥ್ಲೀಟ್ ಎಂ.ಆರ್ ಪೂವಮ್ಮ ಅವರನ್ನು ಹಿಂದಿಕ್ಕಿ ಬೆಳ್ಳಿ ಸಾಧನೆ ಮಾಡಿದ್ದರು. ಮಹಿಳೆಯರ 800 ಮೀ. ಓಟವನ್ನು ವಿಜಯ ಕುಮಾರಿ ಅವರು 2 ನಿಮಿಷ 7.11 ಸೆಕೆಂಡ್ ಗಳಲ್ಲಿ ಕ್ರಮಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಈ ಕುರಿತು ದಿ ರೀನಾ ಡಿಸೋಜಾ ಶೋದಲ್ಲಿ ಮಾತನಾಡಿದ ಅವರು ” 400 ಮೀ ಆದ ಬಳಿಕ ಒಂದು ಗಂಟೆ ಅಂತರದಲ್ಲಿ 800 ಮೀ. ಇತ್ತು. ನಾನು ಓಡುವುದಿಲ್ಲ ಎಂದು ಹೇಳಿದ್ದೆ ಆದರೆ ನಮ್ಮ ಸರ್ ಇಲ್ಲ ನೀನು ಓಡಲೇ ಬೇಕು ಎಂದು ಓಡಿಸಿದರು. ನನಗಂತು ಆ ಅನುಭವ ತುಂಬಾ ಖುಷಿ ಕೊಟ್ಟಿತು” ಎಂದರು.
ಡಾ| ಲಕ್ಷ್ಮೀಶ್ ವರ್ಲ್ಡ್ ನಂ.1 ಕೋಚ್
ಕ್ರೀಡಾಪಟುಗಳಿಗೆ ಸದಾ ಪ್ರೋತ್ಸಾಹ ನೀಡುವ ಡಾ| ಲಕ್ಷ್ಮೀಶ್ ಸರ್ ಅವರನ್ನು ವಿಜಯ ಕುಮಾರಿ ಅವರು ವರ್ಲ್ಡ್ ನಂ.1 ಕೋಚ್ ಎಂದು ಕೊಂಡಾಡಿದರು. “ಅವರಿಗೆ ಹಳ್ಳಿ ಮಕ್ಕಳೆಂದರೆ ಇಷ್ಟ. ನಾನು ಜಿಲ್ಲಾ ಪದಕ ಅಷ್ಟೇ ಮಾಡಿದ್ದೆ. ನಾನು ಶಾಲೆಯಲ್ಲಿರುವಾಗ ನಮ್ಮ ಪಿಟಿ ಟೀಚರ್ ಸಾಯ್(ಸ್ಫೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ) ಬಗ್ಗೆ ಪರಿಚಯ ಮಾಡಿಕೊಟ್ಟರು. ಅಲ್ಲಿ ಸೆಲೆಕ್ಷನ್ ಪ್ರಕ್ರಿಯೆ ನಡೆಯುತ್ತದೆ ಅಂದರು. ನಾನು ಸೆಲೆಕ್ಟ್ ಆಗಬೇಕೆಂದು ಸಾಯ್ಗೆ ಹೋದೆ. ಲೆಟರ್ಸ್ ಬಂತು. ಸಾಯ್ ಸೇರಿಕೊಂಡೆ. ನಾನು ಈ ಮಟ್ಟಕ್ಕೆ ಬರಲು ನಮ್ಮ ಕೋಚ್ ಲಕ್ಷ್ಮೀಶ್ ಅವರೇ ಕಾರಣ ಎಂದರು.
ಪೋಷಕರಿಗೆ ಸ್ಪೋರ್ಟ್ಸ್ ಬಗ್ಗೆ ಗೊತ್ತಿರಲಿಲ್ಲ
ನಾವು ಎಲ್ಲಾ ಕ್ಷೇತ್ರದಲ್ಲಿಯೂ ಮುಂದೆ ಬರಬೇಕಾದರೆ ಮನೆಯವರ ಸಹಕಾರ ತುಂಬಾ ಅಗತ್ಯ. ನಮ್ಮ ಭವಿಷ್ಯವನ್ನು ಕಟ್ಟಿ ಕೊಳ್ಳಲು ನಮ್ಮ ಪ್ರಯತ್ನದ ಜತೆಜತೆಗೆ ತಂದೆ- ತಾಯಿ ಪ್ರೋತ್ಸಾಹ ಕೂಡ ಬೇಕು. ವಿಜಯ ಕುಮಾರಿ ಅವರು ಆರಂಭದ ದಿನಗಳಲ್ಲಿ ತುಂಬಾ ಕಷ್ಟ ಪಟ್ಟಿದ್ದಾರೆ. ತಂದೆ – ತಾಯಿಗೆ ಸ್ಪೋರ್ಟ್ಸ್ ಬಗ್ಗೆ ಗೊತ್ತಿರಲಿಲ್ಲ. ಈಗ ಮಗಳನ್ನು ಕಂಡು ಹೆಮ್ಮೆ ಪಡುತ್ತಾರೆ ಎನ್ನುವ ವಿಜಯಕುಮಾರಿಯವರು” ಈಗ ಪತ್ರಿಕೆ, ಟಿವಿಯಲ್ಲೆಲ್ಲಾ ನನ್ನ ಹೆಸರು ಬಂದಾಗಲೆಲ್ಲ ಹೆಮ್ಮೆ ಪಡುತ್ತಿದ್ದಾರೆ. ಈಗ ಸ್ಪೋರ್ಟ್ಸ್ ಕುರಿತು ಸಂಪೂರ್ಣ ಮಾಹಿತಿಯಿದೆ. ನಿನ್ನ ಸಾಧನೆಗೆ ನಮ್ಮ ಬೆಂಬಲವಿದೆ ಎಂದು ಹೇಳುತ್ತಾರೆ” ಎಂದರು.
ನಾನು ಇಷ್ಟ ಪಡುವ ಜಾಗ ಸಾಯ್
ಇಲ್ಲಿನ ತರಬೇತಿ ತುಂಬಾ ಚೆನ್ನಾಗಿದೆ. ಒಲಿಂಪಿಕ್ಸ್ ಗೆ ಅರ್ಹತೆ ಇರುವ ಕ್ರೀಡಾಪಟುಗಳು ಇಲ್ಲಿದ್ದಾರೆ. ನಾನು ತುಂಬಾ ಇಷ್ಟ ಪಡುವ ಜಾಗ ಇದು. ಇಲ್ಲಿದ್ದರೆ ಮನೆಗೆ ಹೋಗುವುದಕ್ಕು ಮನಸ್ಸೇ ಬರುವುದಿಲ್ಲ. ಸಾಯ್ ಕುರಿತು ಯಾವುದೇ ದೂರುಗಳಿಲ್ಲ ಎಂದು ಸಾಯ್ ಕುರಿತಂತೆ ವಿಜಯ ಕುಮಾರಿಯವರು ಮನದಾಳದ ಅನುಭವ ಹಂಚಿಕೊಂಡರು.
ಪಿಟಿ ಉಷಾ ಪ್ರೇರಣೆ
ನಾನಾಗ ಚಿಕ್ಕವಳಾಗಿದ್ದೆ. ನಾನು ಓಡಿದಾಗಲೆಲ್ಲಾ ಪಿಟಿ ಉಷಾ ತರಹ ಓಡ್ತಿಯಾ ಎನ್ನುತ್ತಿದ್ದರು. ಅವಾಗಿಂದ ಅವರೆಂದರೆ ತುಂಬಾ ಇಷ್ಟ ಎನ್ನುವ ವಿಜಯ ಕುಮಾರಿಯವರು ಏಷ್ಯನ್ ಗೇಮ್ಸ್ ನಲ್ಲಿ ಪಿಟಿ ಉಷಾ ಅವರ ಶಿಷ್ಯೆಯನ್ನೇ ಸೋಲಿಸಿದ ಹೆಮ್ಮೆ ಅವರದು.
ಒಲಿಂಪಿಕ್ಸ್ ಪದಕ ನನ್ನ ಕನಸು
ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ಪದಕ ಗೆಲ್ಲುವುದು ನನ್ನ ಕನಸು. ಅದಕ್ಕಾಗಿ ಅಭ್ಯಾಸ ನಡೆಸುತ್ತಿದ್ದೇನೆ. ಬೆಳಗ್ಗೆ 6.30ಕ್ಕೆ ಗ್ರೌಂಡ್ ಗೆ ಹೋಗುತ್ತೇನೆ. ಬೆಳಗ್ಗೆ 3 ಗಂಟೆ ಹಾಗೂ ಸಂಜೆ 3 ಗಂಟೆ ದಿನ ನಿತ್ಯ ಗ್ರೌಂಡ್ ನಲ್ಲಿ ಅಭ್ಯಾಸ ಮಾಡುತ್ತೇನೆ ಎಂದು ತಮ್ಮ ಅಭ್ಯಾಸದ ಕುರಿತಂತೆ ವಿವರಿಸಿದರು.
ಸೆಗ್ ಮೆಂಟ್ಸ್
ಗ್ರೇ ನಿಕ್ಲ್ಸ್ ಪ್ರಾಯೋಜಕತ್ವದಲ್ಲಿ ಮೂಡಿ ಬಂದ ಗೇಮಿಂಗ್ ಸೆಗ್ ಮೆಂಟ್ ನೋಡೋದಕ್ಕೆ ತುಂಬಾ ಮನರಂಜನೆಯಿಂದ ಕೂಡಿತ್ತು. ಆಕರ್ಷ್ ಅವರು ಈ ಸೆಗ್ ಮೆಂಟ್ ನ್ನು ನಡೆಸಿ ಕೊಟ್ಟರು. 100 ರೂ. ನೋಟನ್ನು 500 ಹಾಗೂ 2000 ನೋಟುಗಳನ್ನಾಗಿ ಬದಲಿಸಿ ಮತ್ತದೇ 100 ರೂ. ನೋಟನ್ನಾಗಿ ಮಾಡಿದರು. ಎರಡನೇ ಗೇಮ್ ನಲ್ಲಿಯೂ ವಿಜಯ ಕುಮಾರಿ ಅವರು ಪಾಲ್ಗೊಂಡು ಅಲ್ಲಿ ನಡೆದ ಕೆಲವು ಜಾದೂ ಚಮತ್ಕಾರ ಕಂಡು ಅಚ್ಚರಿ ವ್ಯಕ್ತಪಡಿಸಿದರು. ಎಜುಕೇಟಿವ್ ಸೆಗ್ ಮೆಂಟ್ ನಲ್ಲಿ ವಿಜಯ ಕುಮಾರಿ ಅವರು ಅಥ್ಲೆಟಿಕ್ಸ್ ಕುರಿತಂತೆ ಸಲಹೆ ಸೂಚನೆಗಳನ್ನು ನೀಡಿದರು. ನೀವು ಸ್ಪೋರ್ಟ್ಸ್ ಆಯ್ಕೆ ಮಾಡಿಕೊಂಡರೆ ಹಾರ್ಡ್ ವರ್ಕ್ ಮಾಡಬೇಕಾತ್ತದೆ. ಸ್ಪೋರ್ಟ್ಸ್ ಖೋಟಾದಡಿ ಬೇಗ ಕೆಲಸ ಸಿಗುತ್ತದೆ. ಧೈರ್ಯ ಬರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ ಎಂದರು. ಫೂಡ್ ಟೇಸ್ಟಿಂಗ್ ಸೆಗ್ ಮೆಂಟ್ ನಲ್ಲಿ ವಿಜಯ ಕುಮಾರಿ ಅವರು ಖಾದ್ಯಗಳ ಸವಿಯನ್ನು ಸವಿದರು. ರಾಪಿಡ್ ಪಾಯರ್ ನಲ್ಲಿ ನಿರೂಪಕಿ ರೀನಾ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ಗ್ರೇ ನಿಕ್ಲ್ಸ್ ಬ್ಯಾಟ್ ಗೆ ವಿಜಯ ಕುಮಾರಿ ಹಸ್ತಾಕ್ಷರ ನೀಡಿದರು. ಕಾರ್ಯಕ್ರಮದ ಕೊನೆಹಂತದಲ್ಲಿ ಲೀವ್ ಆಕ್ಟೀವ್ ಅವರ ಕಡೆಯಿಂದ ಗಿಫ್ಟ್ ಹ್ಯಾಂಪರ್ ನೀಡಲಾಯಿತು.
– ದಯಾಮಣಿ ಹೇಮಂತ್